ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮೌನ ಮುರಿದ ದೀಪಿಕಾ.. ಹೇಳಿದ್ದೇನು?
ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ಖ್ಯಾತ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ತಮ್ಮ ಮೌನ ಮುರಿದಿದ್ದಾರೆ.
ನವದೆಹಲಿ: ಬಾಲಿವುಡ್ ನಲ್ಲಿ 'ಮಸ್ತಾನಿ' ಎಂದೇ ಖ್ಯಾತ ನಟಿ ದೀಪಿಕಾ ಪಡುಕೋಣೆ ಸದ್ಯ ತಮ್ಮ ಮುಂಬರುವ ಚಿತ್ರ 'ಛಪಾಕ್'ನ ಪ್ರಮೋಶನ್ ಕಾರ್ಯದಲ್ಲಿ ತೊಡಗಿದ್ದಾರೆ. ಆಸಿಡ್ ದಾಳಿಯಲ್ಲಿ ಬದುಕುಳಿದ ಸಂತ್ರಸ್ತೆಯ ಕುರಿತು ಕಥಾ ಹಂದರ ಹೊಂದಿರುವ ಈ ಚಿತ್ರ ಜನವರಿ ೧೦ಕ್ಕೆ ಬಿಡುಗಡೆಯಾಗಲಿದೆ. ಅವರ ಈ ಚಿತ್ರದ ಕುರಿತು ಅಭಿಮಾನಿಗಳಲ್ಲಿ ಭಾರಿ ಕ್ರೇಜ್ ಇದೆ. ಇನ್ನೊಂದೆಡೆ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRC ಕುರಿತು ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ ಹಾಗೂ ಬಾಲಿವುಡ್ ಸೆಲಿಬ್ರಿಟಿಗಳು ಕೂಡ CAA ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಈ ಕಾಯ್ದೆಗೆ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಕೆಲವರು ಕಾಯ್ದೆಯನ್ನು ಬೆಂಬಲಿಸುತ್ತಿದ್ದಾರೆ. ಇದೀಗ ಈ ಪಟ್ಟಿಗೆ ದೀಪಿಕಾ ಪಡುಕೋಣೆ ಹೆಸರು ಕೂಡ ಶಾಮೀಲಾಗಿದೆ. ಹೌದು, 'ಛಪಾಕ್' ಪ್ರಮೋಷನ್ ಗಾಗಿ ನೀಡಲಾದ ಒಂದು ಸಂದರ್ಶನದಲ್ಲಿ ಈ ಗುಳಿಕೆನ್ನೆ ಬೆಡಗಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ತಮ್ಮ ಅಬಿಪ್ರಾಯ ಮಂಡಿಸಿದ್ದಾಳೆ.
ಬಾಲಿವುಡ್ ಲೈಫ್ ಗೆ ನೀಡಿದ ಈ ಸಂದರ್ಶನದಲ್ಲಿ ದೀಪಿಕಾಗೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರಶ್ನಿಸಲಾಗಿದೆ. ಈ ವಿವಾದದ ಕುರಿತು ಬಾಲಿವುಡ್ ಮೌನ ವಹಿಸಿದ್ದೇಕೆ ಎಂದು ನಟಿಗೆ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಅವರು, " ಪ್ರತಿಯೊಬ್ಬರೂ ತಮ್ಮದೇ ಆದ ದೃಷ್ಟಿಕೋನ ಹೊಂದಿದ್ದಾರೆ. ಕೆಲವರು ಅದನ್ನು ವ್ಯಕ್ತಪಡಿಸಲು ಬಯಸಿದರೆ ಕೆಲವರು ಅದರಿಂದ ದೂರವಿರಲು ಬಯಸುತ್ತಾರೆ. ಕಲಾವಿದರ ಅಭಿಪ್ರಾಯಕ್ಕೆ ಜನ ಹೆಚ್ಚು ಮಹತ್ವ ನೀಡುವುದಿಲ್ಲ ಎಂಬುದು ನನ್ನ ಅನಿಸಿಕೆ" ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಟ್ರೊಲ್ ಗೆ ಒಳಗಾದ ಸೆಲೆಬ್ರಿಟಿಗಳ ಕುರಿತು ಮಾತನಾಡಿದ ದೀಪಿಕಾ, "ಕಲಾವಿದರನ್ನು ದೇಶಬಿಟ್ಟು ಹೋಗುವಂತೆ ಹೇಳಲಾಗಿದೆ ಮತ್ತು ಇದು ಸರಿ ಅಲ್ಲ" ಎಂದಿದ್ದಾರೆ. ದೀಪಿಕಾ ಅವರ ಚಿತ್ರ 'ಛಪಾಕ್' ಜನವರಿ ೧೦ಕ್ಕೆ ಬೆಳ್ಳಿ ಪರದೆಗೆ ಬರಲಿದ್ದು, ಈ ಚಿತ್ರದಲ್ಲಿ ದೀಪಿಕಾ ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ವಿಕ್ರಾಂತ್ ಮೈಸಿ ಕೂಡ ಪ್ರಮುಖ ಭೂಮಿಕೆಯಲ್ಲಿರಲಿದ್ದಾರೆ.