ದೂದ್ ಪೇಡ ದಿಗಂತ್-ಬೆಂಗಾಲಿ ಬೆಡಗಿ ಐಂದ್ರಿತಾ ಮದುವೆ ಎಲ್ಲಿ ಗೊತ್ತಾ?
ನಂದಿ ಗಿರಿಧಾಮದ ತಪ್ಪಲಿನಲ್ಲಿರುವ ಡಿಸ್ಕವರಿ ವಿಲೇಜ್ನಲ್ಲಿ ವಿವಾಹ ಸಮಾರಂಭ ನಡೆಯಲಿದ್ದು, ಈಗಾಗಲೇ ಮದುವೆಗಾಗಿ 3 ದಿನಗಳ ಕಾಲ ಡಿಸ್ಕವರಿ ವಿಲೇಜ್ ರೆಸಾರ್ಟ್ ಕಂಪ್ಲೀಟ್ ಆಗಿ ಬುಕ್ ಆಗಿದೆ.
ಬೆಂಗಳೂರು: ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ದಿಗಂತ್ ಹಾಗೂ ಐಂದ್ರಿತಾ ರೇ ಇದೇ ಡಿಸೆಂಬರ್ 11 ಮತ್ತು 12 ರಂದು ಹಸೆಮಣೆ ಏರಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಎಲ್ಲಿ ಮದುವೆ ಆಗುತ್ತಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ. ಅಷ್ಟಕ್ಕೂ ಬಾಲಿವುಡ್ ತಾರಾ ಜೋಡಿಗಳಂತೆ ದಿಗಂತ್- ಐಂದ್ರಿತಾ ಜೋಡಿ ಇಟಲಿಯಲ್ಲೋ, ಮುಂಬೈನಲ್ಲೋ ವಿವಾಹವಾಗುತ್ತಿಲ್ಲ. ನಮ್ಮ ಬೆಂಗಳೂರು ಸಮೀಪದಲ್ಲೇ ಇರುವ ಸುಂದರ ಗಿರಿಧಾಮದಲ್ಲಿ ಹಸೆಮಣೆ ಏರಲಿದ್ದಾರೆ.
ಹೌದು, ಪ್ರೇಮಿಗಳ ಸ್ವರ್ಗದಂತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಕ್ಯೂಟ್ ಜೋಡಿ ಆ್ಯಂಡಿ ಹಾಗೂ ದಿಗ್ಗಿಯ ವಿವಾಹ ಕಾರ್ಯಕ್ರಮ ನೆರವೇರಲಿದೆ. ನಂದಿ ಗಿರಿಧಾಮದ ತಪ್ಪಲಿನಲ್ಲಿರುವ ಡಿಸ್ಕವರಿ ವಿಲೇಜ್ನಲ್ಲಿ ವಿವಾಹ ಸಮಾರಂಭ ನಡೆಯಲಿದ್ದು, ಈಗಾಗಲೇ ಮದುವೆಗಾಗಿ 3 ದಿನಗಳ ಕಾಲ ಡಿಸ್ಕವರಿ ವಿಲೇಜ್ ರೆಸಾರ್ಟ್ ಕಂಪ್ಲೀಟ್ ಆಗಿ ಬುಕ್ ಆಗಿದೆ. ಎರಡು ಕುಟುಂಬದ ಆಪ್ತರು ಹಾಗೂ ಚಿತ್ರರಂಗದ ಆಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಈ ಡಿಸ್ಕವರಿ ರೆಸಾರ್ಟ್ ದಿಗಂತ್ ಹಾಗೂ ಐಂದ್ರಿತಾ ಅವರಿಗೆ ಇಷ್ಟವಾದ ಸ್ಥಳವೂ ಕೂಡ ಹೌದಂತೆ. ಹಾಗಾಗಿಯೇ ಈ ರೆಸಾರ್ಟ್ ಅನ್ನು ವಿವಾಹಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡಿ.11 ರಂದು ಬೆಂಗಾಲಿ ಸಂಪ್ರದಾಯದಂತೆ ವಿವಾಹವಾಗಲಿರುವ ದಿಗಂತ್ ಹಾಗೂ ಐಂದ್ರಿತಾ, ಡಿಸೆಂಬರ್ 12ರಂದು ಕೊಡವ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ.
ಮನಸಾರೆ, ಪಾರಿಜಾತ, ಪಂಚರಂಗಿ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಜೋಡಿಯ ನಿರ್ಮಲ ಪ್ರೀತಿಗೆ ಡಿಸೆಂಬರ್ 11 ರಂದು ಅಧಿಕೃತವಾಗಿ ಮದುವೆ ಮುದ್ರೆ ಬೀಳಲಿದೆ.