ಸಾಹಸಸಿಂಹ ವಿಷ್ಣುವರ್ಧನ್ 9ನೇ ವರ್ಷದ ಪುಣ್ಯಸ್ಮರಣೆ; ಪುಷ್ಪನಮನ ಸಲ್ಲಿಸಿದ ಅಭಿಮಾನಿಗಳು
ಇದೇ ವೇಳೆ ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಅಭಿಮಾನ್ ಸ್ಟುಡಿಯೋ ಬಳಿ ನೂರಾರು ಮಂದಿ ಪ್ರತಿಭಟನೇ ನಡೆಸಿದರು.
ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ನಮ್ಮನ್ನೆಲ್ಲಾ ಅಗಲಿ ಇಂದಿಗೆ 9 ವರ್ಷಗಳಾಗಿದ್ದು, ಪುಣ್ಯ ಸ್ಮರಣೆ ಅಂಗವಾಗಿ ನಗರದ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ವಿಷ್ಣುವರ್ಧನ್ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
9ನೇ ಪುಣ್ಯಸ್ಮರಣೆ ಅಂಗವಾಗಿ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದ್ದು, ಅನ್ನದಾನ, ರಕ್ತದಾನ, ಆರೋಗ್ಯ ತಪಾಸಣೆ ಸೇರಿದಂತೆ ಅಭಿಮಾನಿಗಳು ಅನೇಕ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ.
ಇದೇ ವೇಳೆ ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಅಭಿಮಾನ್ ಸ್ಟುಡಿಯೋ ಬಳಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಅಲ್ಲದೆ, ಆದಷ್ಟು ಬೇಗ ಸರ್ಕಾರ ವಿಷ್ಣು ವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಟಿ ಭಾರತಿ ವಿಷ್ಟುವರ್ಧನ್ ಅವರು, "ವಿಷ್ಣು ನಮ್ಮೊಂದಿಗೆ ಇಲ್ಲವಾಗಿ ಇವತ್ತಿಗೆ 9 ವರ್ಷ. ಸ್ಮಾರಕ ನಿರ್ಮಾಣದ ಬಗ್ಗೆ ಹೇಳೋದನ್ನೆಲ್ಲಾ ಹೇಳುತ್ತಲೇ ಇದ್ದೇನೆ. ಹಾಗಾಗಿ ಸಮಾಧಿ ಆಗುವವರೆಗೂ ಈ ವಿಷಯದ ಕುರಿತು ಮಾತನಾಡಲ್ಲ. ಆದಷ್ಟು ಬೇಗ ಸಮಾಧಿ ಆಗ್ಲಿ ಅಂತ ಬೇಡಿಕೊಳ್ಳುತ್ತೇನೆ. ಅಭಿಮಾನಿಗಳು ಕೂಡ ಅದಕ್ಕೆ ಕಾಯುತ್ತಿದ್ದಾರೆ. ಇಷ್ಟು ವರ್ಷಗಳೇ ಕಾದಿದ್ದೇವೆ. ಇನ್ನಷ್ಟು ದಿನ ಕಾಯೋಣ. ಏನೇ ಆಗಲಿ ವಿಷ್ಣುವರ್ಧನ್ ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ" ಎಂದು ಹೇಳಿದರು.