ತೆಲುಗು ಹಾಸ್ಯ ಕಲಾವಿದ ವೇಣುಮಾಧವ್ ನಿಧನ
ಇಂದು ಬೆಳಿಗ್ಗೆ ಇದ್ದಕ್ಕಿದಂತೆ ಅಸ್ವಸ್ಥರಾದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ವೇಣುಮಾಧವನ್ ಅವರು ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಮೃತರು, ಪತ್ನಿ ಶ್ರೀವಾಣಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ವೇಣುಮಾಧವನ್(39) ಅವರನ್ನು ಇಂದು ಬೆಳಿಗ್ಗೆ ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ವೇಣು ಕಳೆದ ವಾರವಷ್ಟೇ ಸಿಕಂದರಾಬಾದ್ ನಲ್ಲಿರುವ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಇಂದು ಬೆಳಿಗ್ಗೆ ಇದ್ದಕ್ಕಿದಂತೆ ಅಸ್ವಸ್ಥರಾದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಓರ್ವ ಮಿಮಿಕ್ರಿ ಕಲಾವಿದನಾಗಿದ್ದ ವೇಣು ಅವರು ಚಿರಂಜೀವಿ ಅಭಿನಯದ 'ಮಾಸ್ಟರ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಇದುವರೆಗೂ ಸುಮಾರು 170 ಚಿತ್ರಗಳಲ್ಲಿ ಅಭಿನಯಿಸಿರುವ ವೇಣು ಅವರುಗೆ ಹಲವು ಪ್ರಶಸ್ತಿಗಳೂ ಸಹ ಸಂದಿವೆ. ಇತ್ತೀಚೆಗೆ ರಾಜಕೀಯ ರಂಗದಲ್ಲೂ ವೇಣುಮಾಧವನ್ ಆಸಕ್ತಿ ತೋರಿದ್ದರು.