ನವದೆಹಲಿ: ಖ್ಯಾತ ಬಾಲಿವುಡ್ ಹಿರಿಯ ನಟ ಮತ್ತು ಟಿವಿ ನಿರೂಪಕ ಫಾರೂಕ್ ಶೇಖ್ ಅವರ 70ನೇ ಜನ್ಮದಿನದ ಪ್ರಯುಕ್ತ ಗೂಗಲ್ ಭಾನುವಾರ ವಿಶೇಷ ಡೂಡಲ್ ಗೌರವ ಸಲ್ಲಿಸಿದೆ. 


COMMERCIAL BREAK
SCROLL TO CONTINUE READING

1948ರ ಮಾರ್ಚ್ 25 ರಂದು ಹುಟ್ಟಿದ ಫಾರೂಕ್​​, 1977 ರಿಂದ 1989ರ ವರೆಗೆ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. 1973ರಲ್ಲಿ ತೆರೆಕಂಡ ಎಂ.ಎಸ್‌ ಸತ್ಯು ಅವರ 'ಗರಂ ಹವಾ' ಫಾರೂಖ್‌ ಶೇಖ್‌ ಅವರು ನಟಿಸಿದ ಮೊದಲ ಚಿತ್ರ. ಇದರೊಂದಿಗೆ ಅವರ ನಟನಾ ಕೌಶಲ್ಯಕ್ಕೆ ಅತಿ ಹೆಚ್ಚು ಮನ್ನಣೆ ದೊರೆಯಿತು. 


ನಂತರ ಚಶ್ಮೆ ಬಡ್ಡೂರ್‌, ನೂರೀ, ಶತರಂಜ್‌ ಕೆ ಖಿಲಾಡಿ ಮತ್ತು ಉಮ್ರಾವ್‌ ಜಾನ್, ರಂಗ್ ಬಿರಂಗಿ ಮತ್ತು ಇತರ ಹಲವು ಜನಪ್ರಿಯ ಚಿತ್ರಗಳಲ್ಲಿ ಅವರು ನಟಿಸಿದ್ದರು. ಅಲ್ಲದೆ, ಸತ್ಯಜಿತ್ ರೇ, ಮುಝಾಫರ್ ಅಲಿ, ಹೃಷಿಕೇಶ್ ಮುಖರ್ಜಿ ಮತ್ತು ಕೇತನ್ ಮೇಹ್ತಾ ಅವರಂಥ ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಿದ್ದರು.


ಕಾರ್ಯಕ್ರಮ ನಿರೂಪಕರಾಗಿ ಫಾರೂಕ್
1988 ರಿಂದ 2002ರ ವರೆಗೆ ದೂರದರ್ಶನ ಕಾರ್ಯಕ್ರಮಗಳಲ್ಲಿನ ಇವರ ನಿರೂಪಣೆ ಹೆಚ್ಚು ಗಮನಸೆಳೆದಿತ್ತು. ಇವರೇ ನಿರೂಪಣೆ ಮಾಡಿದ ‘ಜೀನಾ ಇಸೀಕಾ ನಾಮ್ ಹೈ’ ಕೂಡ ಭಾರಿ ಪ್ರಸಿದ್ಧಿ ಪಡೆದಿತ್ತು. ಇದಕ್ಕಾಗಿ ಫಾರೂಕ್ ರಾಷ್ಟ್ರೀಯ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು. 


ಆದರೆ, ಫಾರೂಕ್ ತಮ್ಮ 65ನೇ ವಯಸ್ಸಿನಲ್ಲಿ(ಡಿಸೆಂಬರ್ 28, 2013) ಹೃದಯಾಘಾತದಿಂದ ದುಬೈನಲ್ಲಿ ನಿಧನರಾದರು.