ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಕುಮಾರಸ್ವಾಮಿ
ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತರೋದು ಸರ್ಕಾರಕ್ಕೂ ಸವಾಲಾಗಿತ್ತು. ಅಂಬಿ ನಡೆ, ನುಡಿ ಚಿರಕಾಲ ನಮ್ಮ ಜೊತೆ ಇರುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಮಂಡ್ಯ: ಮಾಜಿ ಸಚಿವ, ಹಿರಿಯ ನಟ ಅಂಬರೀಶ್ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಾತನಾಡಿದ ಸಿಎಂ, ಅಂಬರೀಶ್ ಕನ್ನಡ ಚಿತ್ರರಂಗದ ಹಿರಿಯ ನಟ. ಹಾಗೆಯೇ ಮಾಜಿ ಸಚಿವರೂ ಕೂಡ ಹೌದು. ಹಾಗಾಗಿ ಅಂಬರೀಶ್ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಅಮರೀಶ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲೂ ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಗೆ ಸಲಹೆ ನೀಡುತ್ತಿದ್ದರು ಅಂಬಿ
ರಾಜ್ಯದ ಅಭಿವೃದ್ಧಿ ಮತ್ತು ಯೋಜನೆಗಳ ಕುರಿತು ಅಂಬರೀಶ್ ಸದಾ ಸಲಹೆ ಸೂಚನೆ ನೀಡುತ್ತಿದ್ದರು. ಮಂಡ್ಯದ ಜನತೆ ಅವರನ್ನು ಕೊನೆಯ ಬಾರಿಗೆ ನೋಡಬೇಕೆಂದು ಒತ್ತಾಯಿಸಿದ್ದರಿಂದ, ಅಭಿಮಾನಿಗಳು ಮತ್ತು ಹುಟ್ಟೂರ ಜನತೆಯ ಅಭಿಲಾಷೆಯಂತೆ ಮಂಡ್ಯದಲ್ಲೂ ಅಂಬರೀಶ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಅಂಬಿ ನಡೆ, ನುಡಿ ಸದಾ ನಮ್ಮೊಂದಿಗಿರುತ್ತದೆ
ಮಾಧ್ಯಮ ಹಾಗೂ ಅಂಬರೀಶ್ ಅಭಿಮಾನಿಗಳ ಸಹಕಾರಕ್ಕೆ ಚಿರಋಣಿ, ಎಲ್ಲರ ಸಹಾರಕ್ಕೆ ಸರ್ಕಾರದ ಪರವಾಗಿ ನಾನು ಆಭಾರಿ. ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತರೋದು ಸರ್ಕಾರಕ್ಕೂ ಸವಾಲಾಗಿತ್ತು. ಅಂಬಿ ನಡೆ, ನುಡಿ ಚಿರಕಾಲ ನಮ್ಮ ಜೊತೆ ಇರುತ್ತದೆ, ಅವರು ನನ್ನ ಅಣ್ಣನ ಸಮಾನರು. ನನ್ನ ಆರೋಗ್ಯದ ಬಗ್ಗೆ ಅಂಬರೀಶ್‌ಗೆ ತುಂಬಾ ಕಾಳಜಿ ಇತ್ತು ಎಂದು ಕುಮಾರಸ್ವಾಮಿ ಹೇಳಿದರು.