ಬೆಂಗಳೂರು: ಕಾವೇರಿ ವಿಚಾರವಾಗಿ ಪದೇ ಪದೇ ಕಿರಿಕಿರಿ ಉಂಟುಮಾಡುತ್ತಿರುವ ತಮಿಳುನಾಡು ರಾಜಕೀಯ ವಿರುದ್ಧ ನಟ ಅನಂತ್ ನಾಗ್ ಕಿಡಿ ಕಾರಿದ್ದು, ಕಾವೇರಿ ಹೋರಾಟದಲ್ಲಿ ತಾವೂ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ನೆಟ್ವರ್ಕ್18 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತಾನಾಡಿದ ಅವರು, "ತಮಿಳುನಾಡಿನ ರಾಜಕೀಯ ಪುಡಾರಿಗಳು ಅನಾವಶ್ಯಕವಾಗಿ ಬಂದ್ ಏರ್ಪಡಿಸುತ್ತಿದ್ದಾರೆ. ಕಾವೇರಿ ಸಮಸ್ಯೆಯನ್ನು ದಶಕಗಳಿಂದ ನೋಡ್ತಾ ಇದೀನಿ. 130ವರ್ಷಗಳಿಂದ ಹೀಗೆ ಇದೆ. ತಮಿಳುನಾಡಿನಲ್ಲಿ ಜನತೆಯ ಸಮಸ್ಯೆಯಿಲ್ಲ. ಆದರೆ ಅಲ್ಲಿನ ರಾಜಕಾರಣಿಗಳದ್ದೇ ಸಮಸ್ಯೆ. ನಟರಾದ ರಜನಿಕಾಂತ್ ಹಾಗೂ ಕಮಲಹಾಸನ್ ರಾಜಕೀಯ ಸೇರಿದ್ದು ಸರಿ. ಆದರೆ ಕಾವೇರಿ ವಿಚಾರದಲ್ಲಿ ಹೊಲಸು ರಾಜಕೀಯ ಮುಂದುವರಿಸುತ್ತಿದ್ದಾರೆ. ಯುವ ನಟ ಸಿಂಬುಗಿರುವ ಸದ್ಬುದ್ಧಿ ಹಿರಿಯ ನಾಯಕರಿಗಿಲ್ಲ. ತಮಿಳುನಾಡು ದುಂಡಾವರ್ತನೆ ಮಾಡಿದ್ರೆ ನಾವೂ ಮಾಡಬೇಕಾಗುತ್ತೆ. ಕಾವೇರಿಗಾಗಿ ನಾನು ಹೋರಾಟಕ್ಕಿಳಿಯಲೂ ಸಿದ್ಧ" ಎಂದು ಹೇಳಿದ್ದಾರೆ. 


ಅಲ್ಲದೆ, ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ನಟ ಅನಂತ್ ನಾಗ್ ಅವರು ಮಾತನಾಡಿರುವ ವಿಡಿಯೋ ಯೂಟ್ಯೂಬ್​ನಲ್ಲಿ ಸೋಮವಾರ ಅಪ್​ಲೋಡ್ ಆಗಿದ್ದು, ಅದರಲ್ಲಿ ಅನಂತ್ ನಾಗ್ ಅವರು ಕಾವೇರಿ ವಿಚಾರವಾಗಿ ತಮಿಳುನಾಡಿನ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 


"ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಮೊದಲಿನಿಂದಲೂ ಅಸಹನೆ, ಅಸಹಾಕಾರ ಮತ್ತು ಘರ್ಷಣೆ ನಿಲುವನ್ನೇ ತೋರಿಸುತ್ತ ಬಂದಿದೆ ಅನ್ನೋದರಲ್ಲಿ ಆಶ್ಚರ್ಯ ಇಲ್ಲ. ಇಂದು ಮೊತ್ತೊಮ್ಮೆ ತಮಿಳುನಾಡು ಮುಖಂಡರು ‘ತಮಿಳುನಾಡು ಬಂದ್’ ಆಚರಿಸಿ, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮುಂದಿರುವುದರಿಂದ ಕೇಂದ್ರದಲ್ಲಿರುವ ಸರ್ಕಾರ, ಕರ್ನಾಟಕ ಸರ್ಕಾರಕ್ಕೆ ಹೆಚ್ಚು ಅನುಕೂಲ ಮಾಡಿಕೊಳ್ಳುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. 


ನಿಜವೆಂದರೆ ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ, ನೀರು ಹಂಚಿಕೆಗೆ ಯಾವ ಸೂಕ್ತ ಪರಿಹಾರ ಸೂಚಿಸಿದರೂ ತಮಿಳುನಾಡು ಅಪಸ್ವರ ಎತ್ತೋದು ವಾಡಿಕೆ. ಕೇಂದ್ರ ಸರ್ಕಾರಗಳು ಬಿಡಿ, ಸುಪ್ರೀಂಕೋರ್ಟ್​ ಕೂಡ ಯಾವುದೇ ಪರಿಹಾರ ನೀಡಲು ಮುಂದಾದರೂ ಅಲ್ಲಿಯ ರಾಜಕಾರಣಿಗಳು ಒಪ್ಪುವುದಿಲ್ಲ.


ಈಗ ಸದ್ಯದಲ್ಲೇ ತಮಿಳುನಾಡಿನಲ್ಲಿ ಯಾವುದೇ ಚುನಾವಣೆ ಇಲ್ಲದಾಗ್ಯೂ ಅಲ್ಲಿನ ನಟರು ರಾಜಕೀಯ ಪ್ರವೇಶ ಮಾಡುವ ಆತುರಲ್ಲಿ ಹಿಂದಿನ ಪೀಳಿಗೆಯಂತೆ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ, ಕನ್ನಡಿಗರ ಭಾಷೆ, ನೆಲ, ಜಲ ಕಾಪಾಡಿಕೊಳ್ಳುವ ಉದಾತ್ತ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜೊತೆ ನಾನೂ ಟೊಂಕ ಕಟ್ಟಿ ನಿಂತಿದ್ದೇನೆ ಅನ್ನೋದನ್ನು ಘಂಟಾಘೋಷವಾಗಿ, ಅನಿವಾರ್ಯವಾಗಿ, ನಮ್ರತೆಯಿಂದ ಹೇಳಲು ಇಚ್ಚಿಸುತ್ತೇನೆ" ಎಂದು ಅನಂತ್ ನಾಗ್ ಹೇಳಿದ್ದಾರೆ.