ಖ್ಯಾತ ಶಾಸ್ತ್ರೀಯ ಗಾಯಕ Pandit Jasraj ನಿಧನ, ಪ್ರಧಾನಿ ಸೇರಿದಂತೆ ಗಣ್ಯರಿಂದ ಸಂತಾಪ ಸೂಚನೆ
ಖ್ಯಾತ ಶಾಸ್ತ್ರೀಯ ಗಾಯಕ ಪಂಡಿತ್ ಜಸರಾಜ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು ಪಂಡಿತ್ ಜಸರಾಜ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ನವದೆಹಲಿ: ಖ್ಯಾತ ಶಾಸ್ತ್ರೀಯ ಗಾಯಕ ಪಂಡಿತ್ ಜಸರಾಜ್(Pandit Jasraj) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ಅವರು ತಮ್ಮ ಕೊನೆಯುಸಿರು ಎಳೆದಿದ್ದಾರೆ. ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಪಂಡಿತ್ ಜಸರಾಜ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಪಂಡಿತ್ ಜಸರಾಜ್ ಅವರ ಪುತ್ರಿ ದುರ್ಗಾ ಜಸರಾಜ್ ನಿಧನವನ್ನು ಖಚಿತಪಡಿಸಿದ್ದಾರೆ. ಪಂಡಿತ್ ಜಸರಾಜ್ ಜನಿಸಿದ್ದು 28 ಜನವರಿ 1930 ರಂದು. ಅವರ ತಂದೆ ಪಂಡಿತ್ ಮೋತಿರಾಮ್ ಮೆವಾತಿ ಘರಾನಾದ ಸಂಗೀತಗಾರರಾಗಿದ್ದರು.
"ಅಮೆರಿಕದ ನ್ಯೂಜೆರ್ಸಿಯಲ್ಲಿ ಬೆಳಗ್ಗೆ 5: 15 ಕ್ಕೆ ಸಂಗೀತ ಮಾರ್ತಂಡ್ ಪಂಡಿತ್ ಜಸರಾಜ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಲು ನಮಗೆ ಅತೀವ ದುಃಖವಾಗುತ್ತಿದೆ" ಎಂದು ಅವರ ಪುತ್ರ ದುರ್ಗಾ ಜಸರಾಜ್ ಮಾಹಿತಿ ನೀಡಿದ್ದಾರೆ.
ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಪಂಡಿತ್ ಜಸರಾಜ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಪಂಡಿತ್ ಜಸರಾಜ್ ಅವರ ಭಾವಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, "ಪಂಡಿತ್ ಜಸರಾಜ್ ಅವರ ನಿಧನದಿಂದ ಭಾರತೀಯ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕೇವಲ ಅವರ ಪ್ರಸ್ತುತಿಗಳು ಮಾತ್ರ ಉತ್ಕೃಷ್ಟವಾಗಿರದೇ, ಹಲವು ಉತ್ಕೃಷ್ಟ ದರ್ಜೆಯ ಶಾಸ್ತ್ರೀಯ ಗಾಯಕರಿಗೆ ಓರ್ವ ಅಸಾಧಾರಣ ಗುರು ಕೂಡ ಆಗಿದ್ದರು. ವಿಶ್ವಾದ್ಯಂತ ಇರುವ ಅವರ ಪ್ರಶಂಸಕರ ಪ್ರತಿ ಹಾಗೂ ಕುಟುಂಬ ಸದಸ್ಯರ ಪ್ರತಿ ನನ್ನಸಂತಾಪ... ಓಂ ಶಾಂತಿ" ಎಂದಿದ್ದಾರೆ.
ಖ್ಯಾತ ಶಾಸ್ತ್ರೀಯ ಗಾಯಕ ಪಂಡಿತ್ ಜಸರಾಜ್ ಅವರ ನಿಧನದ ಬಗ್ಗೆ ನನಗೆ ತುಂಬಾ ಬೇಸರವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮೆವಾತಿ ಘರಾನಾ ಪ್ರತಿನಿಧಿಸುತ್ತಿದ್ದ ಪಂಡಿತ್‌ಜಿಯ ತಮ್ಮ ಸಂಪೂರ್ಣ ಜೀವನವು ಸಾಧನೆಯಲ್ಲಿಕಳೆದಿದ್ದರು. ತಮ್ಮ ಕಲೆಯಿಂದ ಸಂಗೀತ ಜಗತ್ತಿಗೆ ಅವರು ಹೊಸ ಎತ್ತರವನ್ನು ನೀಡಿದ್ದರು. ಅವರ ನಿರ್ಗಮನದಿಂದಾಗಿ ಸಂಗೀತವು ಮೌನವಾಗಿದೆ. ದೇವರುಅವರಿಗೆ ತನ್ನ ಶ್ರೀಚರಣದಲ್ಲಿ ಸ್ಥಾನ ಕಲ್ಪಿಸಲಿ ಎಂದಿದ್ದಾರೆ.
ಜಾನಪದ ಗಾಯಕಿ ಮಾಲಿನಿ ಅವಸ್ಥಿ ಕೂಡ ಟ್ವೀಟ್ ಮಾಡುವ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. "ಮೇವಾತಿ ಘರಾನಾದ ಹೆಮ್ಮೆಯ ಗಾಯಕ ಪದ್ಮವಿಭೂಷಣ್ ಪಂಡಿತ್ ಜಸರಾಜ್ ಇನ್ನು ಮುಂದೆ ಇಲ್ಲ. ಇಂದು ಅವರು ಅಮೆರಿಕದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಂಗೀತ ಜಗತ್ತಿಗೆ ದಿಉ ಭರಿಸಲಾಗದ ಹಾನಿ! ವಿನಮ್ರ ಗೌರವ! ಓಂ ಶಾಂತಿ. '' ಎಂದು ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಪಂಡಿತ್ ಜಸರಾಜ್ ಸಾವಿಗೆ ಸಂತಾಪ ಸೂಚಕ ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ, " ನಿಮ್ಮ ಸುಮಧುರ ಧ್ವನಿ ಲಕ್ಷಾಂತರ ರಸಿಕರ ಜೀವನ ರೆಖೆಯಾಗಿತ್ತು. ಆಕಸ್ಮಿಕವಾವಾಗಿ ನೀವು ಹೊರಟು ಹೋಗಿದ್ದು, ಸಂಗೀತ ಜಗತ್ತನ್ನು ಕ್ಷಣ ಕಾಲ ಶೂನ್ಯಕ್ಕೆ ತಳ್ಳಿದೆ ! ಸ್ವರ ಸಾಮ್ರಾಟ ಇನ್ನಿಲ್ಲ!! ನಿಮ್ಮ ನೆನಪು ನಮ್ಮನ್ನು ಕಾಡಲಿದೆ ಪಂಡಿತ್ ಜಸರಾಜ್ !! ಈಶ್ವರ ತನ್ನ ಶ್ರೀಚರಣಗಳಲ್ಲಿ ನಿಮಗೆ ಸ್ಥಾನ ಕಲ್ಪಿಸಲಿ!" ಎಂದಿದ್ದಾರೆ.
"ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ, ಸುಪ್ರಸಿದ್ಧ ಗಾಯಕ ಪಂಡಿತ್ ಜಸರಾಜ್ ಅವರ ನಿಧನದ ಸುದ್ದಿ ದುಃಖ ತಂದಿದೆ. ನಾನು ಅವರಿಗೆ ಶೃದ್ಧಾಂಜಲಿ ಅರ್ಪಿಸುತ್ತೇನೆ. ಅವರ ನಿಧನ ಸಂಗೀತ ಕ್ಷೇತ್ರಕ್ಕೆ ದೊಡ್ಡ ಹಾನಿ" ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಹೇಳಿದ್ದಾರೆ
ಇದೇ ವರ್ಷದ ಜನವರಿ ತಿಂಗಳಿನಲ್ಲಿ ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಪಂಡಿತ್ ಜಸರಾಜ್ ಕೊನೆಯ ಬಾರಿಗೆ ಏಪ್ರಿಲ್ 9 ರಂದು ಹನುಮಾನ್ ಜಯಂತಿಯ ಅಂಗವಾಗಿ ಫೇಸ್ ಬುಕ್ ಲೈವ್ ಮೂಲಕ ವಾರಾನಾಸಿಯ ಸಂಕಟಮೋಚನ ಹನುಮಾನ್ ಮಂದಿರಕ್ಕಾಗಿ ಪ್ರಸ್ತುತಿ ಸಾದರುಪಡಿಸಿದ್ದರು.