ಗಾಂಜಾ ಸಾಂಗ್ ಹಾಡಿದ್ದ ಗಾಯಕ ಚಂದನ್ ಶೆಟ್ಟಿಗೆ ಸಿಸಿಬಿ ನೋಟಿಸ್
2015ರಲ್ಲಿ ಬಿಡುಗಡೆ ಆಗಿದ್ದ `ಅಂತ್ಯ` ಚಿತ್ರದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಗೆ ಯುವಕರಿಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿ ಚಂದನ್ ಗೆ ನೋಟಿಸ್ ನೀಡಲಾಗಿದೆ.
ಬೆಂಗಳೂರು: ಗಾಂಜಾ ಸೇವನೆಗೆ ಪ್ರಚೋದನೆ ನೀಡಿದ ಆರೋಪದಡಿ ಬಿಗ್ ಬಾಸ್ ಖ್ಯಾತಿಯ ಗಾಯಕ ಚಂದನ್ ಶೆಟ್ಟಿ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀದಿದ್ದಾರೆ.
2015ರಲ್ಲಿ ಬಿಡುಗಡೆ ಆಗಿದ್ದ 'ಅಂತ್ಯ' ಚಿತ್ರದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಗೆ ಯುವಕರಿಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿ ಸಿಸಿಬಿಯ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಎಸಿಪಿ ಬಿ.ಎಸ್. ಮೋಹನ್ ಕುಮಾರ್ ಅವರು ಚಂದನ್ ಗೆ ನೋಟಿಸ್ ನೀಡಿದ್ದಾರೆ.
ಅಂತ್ಯ ಸಿನಿಮಾದಲ್ಲಿ ಗಾಂಜಾಗೆ ಸಂಬಂಧಪಟ್ಟ ಹಾಡನ್ನು ನೋಡಿ ಹಲವು ಜನರು ಪ್ರಚೋದನೆಗೆ ಒಳಗಾಗಿ ಮಾದಕ ವಸ್ತು ಸೇವನೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ವಿಚಾರಣೆಗಾಗಿ ಕಚೇರಿಗೆ ಬನ್ನಿ ಎಂದು ಬಿ.ಎಸ್. ಮೋಹನ್ ಕುಮಾರ್ ನೋಟಿಸ್ ನಲ್ಲಿ ಬರೆದಿದ್ದಾರೆ.
ಹಾಡಿನಲ್ಲಿ ಏನಿದೆ? ಹರಹರ ಶಿವ ಶಂಕರನ ನೋಡಿ ಅವನಿಗೂ ಮಾಡಿದೆ ಗಾಂಜಾ ಮೋಡಿ. ಧಮ್ಮು ಬಿಡಬೇಡ, ಅದೇ ನಮಗೆ 'ಬಿಯರ್ ಎತ್ತೋದು ಹಳತಾಗಿದೆ, ಗಾಂಜಾ ಎಳೆಯೊದು ಹೊಸದಾಗಿದೆ', 'ಭಂಗಿ ಎಳಕೊಂಡು ನಗುತಾ ಇರು', 'ಶಿವನು ಹಿಡಿದರೆ ಭಂಗಿಯಂತೆ, ನಾವು ಹಿಡಿದರೆ ಕಂಬಿ ಅಂತೆ', 'ಬಿಡಬೇಡ ಧಮ್ಮು, ನಮ್ಮಯ ಪಾಲಿಗೆ ಇದೇ ವಿಸ್ಕಿ, ರಮ್ಮು' ಎಂಬ ಸಾಲುಗಳು ಹಾಡಿನಲ್ಲಿದ್ದು ಇದರಿಂದ ಯುವಕರು ಮಾದಕ ವಸ್ತು ಸೇವನೆ ಮಾಡಲು ಪ್ರಚೋದನೆ ದೊರೆತಂತಾಗುತ್ತದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಾಡಿಗೆ ಸಂಬಂಧಿಸಿದಂತೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಚಂದನ್ ಗೆ ನೋಟಿಸ್ ನೀಡಲಾಗಿದೆ. ಅಕಸ್ಮಾತ್ ವಿಚಾರಣೆಗೆ ಹಾಜರಾಗದಿದ್ದರೆ ಚಂದನ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.