ಚೆನ್ನೈ: ತಮಿಳು ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಲು ಸಿದ್ಧವಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನಾಧಾರಿತ ಚಿತ್ರ 'ದಿ ಐರನ್ ಲೇಡಿ' ಫಸ್ಟ್ ಲುಕ್ ಶನಿವಾರ  ಬಿಡುಗಡೆಯಾಗಿದೆ. 


COMMERCIAL BREAK
SCROLL TO CONTINUE READING

ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಜೀವನಾಧಾರಿತ ಚಿತ್ರ ದಿ ಆ್ಯಕ್ಸಿಡೆಂಟಲ್‌ ಪ್ರೈಮ್​​ ಮಿನಿಸ್ಟರ್‌ ಸಿನಿಮಾ ಭಾರಿ ಸುದ್ದಿಗೆ ಗ್ರಾಸವಾಗಿರುವ ಬೆನ್ನಲ್ಲೇ ಚಿತ್ರನಟಿ ಹಾಗೂ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾರ ಎರಡನೇ ವರ್ಷದ ಪುಣ್ಯತಿಥಿ ದಿನವೇ ಅವರ ಜೀವನಾಧಾರಿತ ಚಿತ್ರ ‘ದಿ ಐರನ್​ ಲೇಡಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.


ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕಿ ಪ್ರಿಯದರ್ಶಿನಿ ಅವರು, "ನನಗೆ ಜಯಲಲಿತಾ ಎಂದರೆ ಬಹಳ ಇಷ್ಟ. ಕೇವಲ 2ವರ್ಷದ ಹಿಂದೆ ನಿಧನರಾದ ಅವರ ಕುರಿತು ಸಿನಿಮಾ ಮಾಡೋದು ಒಂದು ಸವಾಲು, ಅದರಲ್ಲೂ ಒಬ್ಬ ವಿವಾದಾತ್ಮಕ ವ್ಯಕ್ತಿಯ ಜೀವನಚರಿತ್ರೆಯನ್ನ ತೆರೆ ಮೇಲೆ ತರೋದು ಕೂಡ ಅಷ್ಟೇ ಕಷ್ಟಸಾಧ್ಯ. ನನ್ನ ಪರಿಸ್ಥಿತಿ ಈಗ ತೆಳುವಾದ ಮಂಜಿನ ಮೇಲೆ ನಡೆಯುವಂತಿದೆ. ಆದರೂ ಜಯಲಲಿತಾ ಎಷ್ಟೋ ಮಂದಿಗೆ ಸ್ಫೂರ್ತಿಯಾಗಿದ್ದನ್ನು ನಾವೆಂದೂ ಮರೆಯುವಂತಿಲ್ಲ" ಎಂದಿದ್ದಾರೆ. 


ಚಿತ್ರದಲ್ಲಿ ಜಯಲಲಿತಾ ಅವರ ಪಾತ್ರದಲ್ಲಿ ನಟಿ ನಿತ್ಯ ಮೆನನ್ ಅಭಿನಯಿಸುತ್ತಿದ್ದು, ಥೇಟ್ ಜಯಲಲಿತಾ ಅವರಂತೆ ಕಾಣುತ್ತಾರೆ. ಜಯಲಲಿತಾ ಅವರ ಬಾಲ್ಯದಿಂದ ಅವರು ಕೊನೆಯುಸಿರೆಳೆವವರೆಗಿನ ಅವರ ಜೀವನದ ಸಂಪೂರ್ಣ ವಿವರ ಚಿತ್ರದಲ್ಲಿ ಕಾಣಬಹುದು. ಈಗಾಗಲೇ ಚಿತ್ರದ ಶೂಟಿಂಗ್ ಹೈದರಾಬಾದ್'ನಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರ ತೆರೆ ಕಾಣಲಿದೆ.