ಮುಂಬೈ:ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ತಮ್ಮ ಮುಂಬರುವ 'ಪಂಗಾ' ಚಿತ್ರದ ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದು, ಹಲವರ ಜೊತೆ 'ಪಂಗಾ'ಗಿಳಿಯುತ್ತಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿರುವ ಒಂದು ಸಂದರ್ಶನದಲ್ಲಿ ನಿರ್ಭಯಾ ತಾಯಿ ಆಶಾದೇವಿ ಅವರಿಗೆ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಇಂದಿರಾ ಜಯಸಿಂಗ್ ಅವರು ನೀಡಿರುವ ಸಲಹೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿರಿಯ ವಕೀಲರ ಮೇಲೆ ಗಂಭೀರ ಆರೋಪ ಮಾಡಿರುವ ಕಂಗನಾ, ಇಂತವರ ಗರ್ಭದಿಂದಲೇ ನಾಳಿನ ರೇಪಿಸ್ಟ್ ಗಳು ಹುಟ್ಟಿಕೊಳ್ಳುತ್ತಾರೆ ಎಂದು ತೀವ್ರ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ ಇವರ ಆಶ್ರಯ ಪಡೆಯುವ ಜನರು ಬಹಿರಂಗವಾಗಿ ಅಪರಾಧಗಳನ್ನು ಎಸಗಿ, ಕಾನೂನಿನ ಕಣ್ಣಲಿ ಮಣ್ಣೆರಚಿ ಸುಲಭವಾಗಿ ಪಾರಾಗುತ್ತಾರೆ ಎಂದು ಆರೋಪಿಸಿದ್ದಾರೆ.



COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ನಿರ್ಭಯಾ ತಾಯಿಗೆ ಸಲಹೆ ನೀಡಿದ್ದ ಇಂದಿರಾ ಜಯಸಿಂಗ್, "ನಮಗೆಲ್ಲರಿಗೂ ನಿಮ್ಮ ನೋವು ಅರ್ಥವಾಗುತ್ತದೆ. ಆದರೆ, ನಾವು ಮರಣದಂಡನೆಯನ್ನು ವಿರೋಧಿಸುತ್ತೇವೆ. ಇಲ್ಲಿ ನೀವು ವಿಶಾಲ ಹೃದಯದಿಂದ ಯೋಚಿಸುವ ಅಗತ್ಯತೆ ಇದ್ದು,  ದಿ.ರಾಜೀವ್ ಗಾಂಧಿ ಅವರ ಹಂತಕಿ ನಳಿನಿಗೆ  ಸೋನಿಯಾ ಗಾಂಧಿ ಯಾವ ರೀತಿ ಕ್ಷಮೆ ನೀಡಿದರೋ, ಅದೇ ಮಾದರಿಯಲ್ಲಿ ನೀವು ನಿರ್ಭಯಾ ಹಂತಕರನ್ನು ಕ್ಷಮಿಸಬೇಕು" ಎಂದಿದ್ದರು.



ಇತ್ತ ಕಂಗನಾ ಅಭಿನಯಿಸಿರುವ ಚಿತ್ರದ ಕುರಿತು ಹೇಳುವುದಾದರೆ, ಚಿತ್ರದಲ್ಲಿ ಕಂಗನಾ 32ವರ್ಷದ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮಹಿಳೆ ಕಬಡ್ಡಿ ತಂಡದಿಂದ ನಿವೃತ್ತರಾಗಿದ್ದಾರೆ. ಜನವರಿ 24ರಂದು ಬೆಳ್ಳಿ ಪರದೆಯ ಮೇಲೆ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಕಂಗನಾ ಜೊತೆ ರಿಚಾ ಚಡ್ಡಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.