ನವದೆಹಲಿ: ಕಳೆದ ವರ್ಷದಿಂದ ಬಾಲಿವುಡ್ ನಲ್ಲಿ ಬಯೋಪಿಕ್'ಗಳದ್ದೇ ಅಬ್ಬರ ಆರಂಭವಾಗಿದೆ. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಬಯೋಪಿಕ್ ಸಿದ್ಧವಾಗುತ್ತಿದೆ. ಈ ಸರದಿಯಲ್ಲೀಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಅಭಿನೇತ್ರಿ ದಿವಂಗತ ಜಯಲಲಿತಾ ಬಯೋಪಿಕ್ ಸಿದ್ದವಾಗುತ್ತಿದ್ದು, ಬಾಲಿವುಡ್ ಕ್ವೀನ್ ಕಂಗನಾ ರಾವತ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


COMMERCIAL BREAK
SCROLL TO CONTINUE READING

ವರ್ಷಾರಂಭದಲ್ಲಿ ಕಂಗನಾ ಅಭಿನಯಿಸಿದ್ದ ಝಾನ್ಸಿ ರಾಣಿಯ ಬಯೋಪಿಕ್ 'ಮಣಿಕರ್ಣಿಕಾ ದಿ ಕ್ವೀನ್ ಆಫ್ ಝಾನ್ಸಿ' ಚಿತ್ರ ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದಿತ್ತು. ಇದೀಗ ಮುಂಬರುವ ವರ್ಷದಲ್ಲಿ ಜಯಲಲಿತಾ ಬಯೋಪಿಕ್'ನಲ್ಲಿ ಕಂಗನಾ ತಲೈವಿಯಾಗಿ ಅಭಿನಯಿಸಲಿದ್ದಾರೆ.


ಈ ಬಗ್ಗೆ ಖ್ಯಾತ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಜಯಲಲಿತಾ ಬಯೋಪಿಕ್ ನಲ್ಲಿ ಜಯಲಲಿತಾ ಪಾತ್ರಧಾರಿಯಾಗಿ ಕಂಗನಾ ನಟಿಸಲಿದ್ದಾರೆ. ಈ ಬಯೋಪಿಕ್ ತಮಿಳಿನಲ್ಲಿ 'ತಲೈವಿ' ಶೀರ್ಷಿಕೆಯಲ್ಲಿ ಹಾಗೂ ಹಿಂದಿಯಲ್ಲಿ 'ಜಯಾ' ಹೆಸರಿನಲ್ಲಿ ನಿರ್ಮಾಣವಾಗಲಿದೆ. ಚಿತ್ರವನ್ನು ಎ.ಎಲ್.ವಿಜಯ್ ನಿರ್ದೇಶಿಸುತ್ತಿದ್ದು, ಬಾಹುಬಲಿ ಮತ್ತು ಮಣಿಕರ್ಣಿಕಾ ಚಿತ್ರಗಳಿಗೆ ಕಥೆ ಬರೆದಿರುವ ವಿಜಯೇಂದ್ರ ಪ್ರಸಾದ್ ಈ ಸಿನಿಮಾಕ್ಕೂ ಕಥೆ ಬರೆದಿದ್ದಾರೆ. ಚಿತ್ರದ ನಿರ್ಮಾಣವನ್ನು ವಿಷ್ಣುವರ್ಧನ್ ಇಂದೂರಿ ಮತ್ತು ಶೈಲೇಶ್ ಸಿಂಗ್ ತಲೈವಿ ನಿರ್ಮಾಣ ಮಾಡಲಿದ್ದಾರೆ" ಎಂದು ತರಣ್ ವಿವರಿಸಿದ್ದಾರೆ. 



ಸಿನಿಮಾದೊಂದಿಗೆ ಭಾರತೀಯ ರಾಜಕಾರಣಕ್ಕೆ ಜಯಲಲಿತಾ ಕೊಡುಗೆ ಅಪಾರ. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸುವುದರೊಂದಿಗೆ 1991 ರಿಂದ 2016ರ ವರೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಜಯಲಲಿತಾ ಅವರು ಅನಾರೋಗ್ಯದಿಂದಾಗಿ 2016ರಲ್ಲಿ ನಿಧನರಾದರು.