ಸೆಪ್ಟೆಂಬರ್ 8 ಮತ್ತು 9 ರಂದು ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ
ಇದೇ ಸೆಪ್ಟೆಂಬರ್ 8 ಹಾಗೂ 9 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಬೆಂಗಳೂರು: ಸ್ಯಾಂಡಲ್'ವುಡ್ ತಾರೆಯರ ಕನ್ನಡ ಚಲನಚಿತ್ರ ಕಪ್ ಟೂರ್ನಿಗೆ ಕಡೆಗೂ ಮುಹೂರ್ತ ಫಿಕ್ಸ್ ಆಗಿದ್ದು ವೇಳಾಪಟ್ಟಿ ಬಿಡುಗಡೆಯಾಗಿದೆ.
ಇದೇ ಸೆಪ್ಟೆಂಬರ್ 8 ಹಾಗೂ 9 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು, ಕದಂಬ ಲಯನ್ಸ್ ತಂಡದ ನೇತೃತ್ವವನ್ನು ಕಿಚ್ಚ ಸುದೀಪ್, ಒಡೆಯರ್ ಚಾರ್ಜರ್ಸ್ ತಂಡದ ನೇತೃತ್ವವನ್ನು ಗೋಲ್ಡನ್ ಸ್ಟಾರ್ ಗಣೇಶ್, ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ರಾಕಿಂಗ್ ಸ್ಟಾರ್ ಯಶ್, ಗಂಗಾ ವಾರಿಯರ್ಸ್ ತಂಡವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಹೊಯ್ಸಳ ಈಗಲ್ಸ್ ತಂಡವನ್ನು ರಿಯಲ್ ಸ್ಟಾರ್ ಉಪೇಂದ್ರ ಮುನ್ನಡೆಸಲಿದ್ದಾರೆ.
ಸೆಪ್ಟೆಂಬರ್ 8 ರಂದು ಮಧ್ಯಾಹ್ನ 12 ಗಂಟೆಗೆ ಪಂದ್ಯಾವಳಿ ಉದ್ಘಾಟನೆಯಾಗಲಿದ್ದು, ಕಿಚ್ಚ ಸುದೀಪ್ ನೇತೃತ್ವದ ಕದಂಬ ಲಯನ್ಸ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಟೂರ್ನಿಯಲ್ಲಿ ಅಂತರಾಷ್ಟ್ರೀಯ ಮಾಜಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ತಿಲಕರತ್ನೆ ದಿಲ್ಯ್ಯಾನ್, ಓವೈಸ್ ಶಾ, ಹರ್ಷೆಲ್ ಗಿಬ್ಸ್, ಆ್ಯಡಂ ಗಿಲ್’ಕ್ರಿಸ್ಟ್ ಹಾಗೂ ಲ್ಯಾನ್ಸ್ ಕ್ಲೂಸ್ನರ್ ಪಾಲ್ಗೊಳ್ಳುವ ಮೂಲಕ ಆಟದ ರಂಗು ಹೆಚ್ಚಿಸಲಿದ್ದಾರೆ. ಟಿಕೆಟ್ ಬೆಲೆ 50 ರೂ.ಗಳಿಂದ 5000 ರೂ.ಗಳವರೆಗೆ ನಿಗದಿಪಡಿಸಲಾಗಿದೆ.
ಕನ್ನಡ ಚಲನಚಿತ್ರ ಕಪ್ ಟೂರ್ನಿಗೆ ಅಭಿಮಾನಿಗಳು ಆಗಮಿಸಿ ಪ್ರೋತ್ಸಾಹಿಸುವಂತೆ ಕಿಚ್ಚ ಸುದೀಪ್ ಸೇರಿದಂತೆ ಹಲವು ನಟರು ಕರೆ ನೀಡಿದ್ದಾರೆ.