ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ‌ ಬಳಲುತ್ತಿದ್ದ ಸ್ಯಾಂಡಲ್​ವುಡ್(Sandalwood) ಖ್ಯಾತ ಹಿರಿಯ ನಟ ಸತ್ಯಜಿತ್(Sathyajith) ನಿಧನ ಹೊಂದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 72 ವರ್ಷ ವಯಸ್ಸಾಗಿತ್ತು. ಹಾರ್ಟ್ ಸ್ಟ್ರೋಕ್ ಮತ್ತು ಬಿಪಿ ಲೋ ಹಿನ್ನೆಲೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ನಟ ಸತ್ಯಜಿತ್ ಪತ್ನಿ ಸೋಫಿಯಾ ಬೇಗಂ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.   


COMMERCIAL BREAK
SCROLL TO CONTINUE READING

ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಸತ್ಯಜಿತ್ ಅವರು ಐಸಿಯು(ICU)ವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆಂದು ಸತ್ಯಜಿತ್ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಸ್ಪತ್ರೆಯಿಂದ ಬೆಂಗಳೂರಿನಲ್ಲಿರುವ ನಿವಾಸಕ್ಕೆ ಸತ್ಯಜಿತ್ ಪಾರ್ಥಿವ ಶರೀರವನ್ನು ರವಾನಿಸಲಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1.30ರ ನಂತರ ಸತ್ಯಜಿತ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ರಕ್ತದ ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಕಿರಣ್ ಖೇರ್


ಸತ್ಯಜಿತ್ ಅವರ ಮೂಲ ಹೆಸರು ಸೈಯ್ಯದ್ ನಿಜಾಮುದ್ದೀನ್(Syed Nizamuddin). ಅವರು ಕನ್ನಡ ಚಿತ್ರರಂಗದಲ್ಲಿ ಸತ್ಯಜಿತ್ ಎಂಬ ಹೆಸರಿನಿಂದಲೇ ಗುರುತಿಸಿಕೊಂಡಿದ್ದರು. 1986 ರಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಅವರು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ತಮ್ಮ ವಿಶಿಷ್ಟ ಅಭಿನಯದಿಂದಲೇ ಅವರು ಖ್ಯಾತಿ ಪಡೆದು ಕರುನಾಡಿನ ಮನೆಮಾತಾಗಿದ್ದಾರೆ. ಹೆಚ್ಚಾಗಿ ಖಳನಟವಾಗಿ ಗುರುತಿಸಿಕೊಂಡಿದ್ದ ಸತ್ಯಜಿತ್ ಸೂಪರ್ ಹಿಟ್ ಚಿತ್ರಗಳಾದ ಪುಟ್ನಂಜ, ಶಿವ ಮೆಚ್ಚಿದ ಕಣ್ಣಪ್ಪ, ಚೈತ್ರದ ಪ್ರೇಮಾಂಜಲಿ, ಪೊಲೀಸ್ ಸ್ಟೋರಿ, ಮಂಡ್ಯದ ಗಂಡು, ಅಪ್ಪು, ಅರಸು, ಅಭಿ, ಆಪ್ತಮಿತ್ರ, ಮಾಣಿಕ್ಯ, ರನ್ನ, ರಣವಿಕ್ರಮ, ಮೈತ್ರಿ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು.


ಇದನ್ನೂ ಓದಿ: ಅನೈತಿಕ ಸಂಬಂಧದ ಕುರಿತ ವದಂತಿಗಳಿಗೆ ನಟಿ ಸಮಂತಾ ಹೇಳಿದ್ದೇನು ಗೊತ್ತೇ?


ಅನೇಕ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದ ಸತ್ಯಜಿತ್ ಹೆಚ್ಚಾಗಿ ಗಮನ ಸೆಳೆದಿದ್ದು ಮಾತ್ರ ವಿಲನ್ ಮತ್ತು ಪೋಷಕ ಪಾತ್ರಗಳಲ್ಲಿ. ಸತ್ಯಜಿತ್ ಅವರಿಗೆ ಗ್ಯಾಂಗ್ರಿನ್(Gangrene) ಸಮಸ್ಯೆ ಕಾಣಿಸಿಕೊಂಡ ಬಳಿಕ ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾಗಿತ್ತು. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ನಟನೆಯ ‘ಸೆಕೆಂಡ್ ಹಾಫ್’ ಸಿನಿಮಾದಲ್ಲಿ ವ್ಹೀಲ್ ಚೇರ್ ನಲ್ಲಿಯೇ ಕುಳಿತುಕೊಂಡು ನಟಿಸುವ ಮೂಲಕ ಗಮನ ಸೆಳೆದಿದ್ದರು. ಬಳಿಕ ಬೇರೆ ಯಾವುದೇ ಸಿನಿಮಾದಲ್ಲಿ ಸತ್ಯಜಿತ್ ಕಾಣಿಸಿಕೊಂಡಿರಲಿಲ್ಲ. ಸತ್ಯಜಿತ್ ನಿಧನದಿಂದ ಅವರ ಲಕ್ಷಾಂತರ ಅಭಿಮಾನಿಗಳಿಗೆ ಆಘಾತವಾಗಿದ್ದು, ಶೋಕ ವ್ಯಕ್ತಪಡಿಸುತ್ತಿದ್ಧಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ