`ರಾಕಿ ಭಾಯ್` ಬರ್ತಡೇ ಗೆ ಸಿಕ್ತು ಭರ್ಜರಿ ಗಿಫ್ಟ್!
ಮತ್ತೊಂದು ಇತಿಹಾಸ ನಿರ್ಮಿಸಿದ ಕೆಜಿಎಫ್.
ಬೆಂಗಳೂರು: 33 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ 'ರಾಕಿ ಭಾಯ್' ಭರ್ಜರಿ ಗಿಫ್ಟ್ ಸಿಕ್ಕಿದ್ದು, ‘ಕೆಜಿಎಫ್’ ಚಿತ್ರ 200 ಕೋಟಿ ಕ್ಲಬ್ ಸೇರಿದೆ. ಅಷ್ಟೇ ಅಲ್ಲದೆ 200 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಐದೂ ಭಾಷೆಗಳಲ್ಲಿ ಗೆಲುವಿನ ನಗೆ ಬೀರಿದ್ದು, 18ನೇ ದಿನಕ್ಕೆ ಚಿತ್ರ 200 ಕೋಟಿ ರೂಪಾಯಿ ತಲುಪಿ ದಾಖಲೆ ಬರೆದಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ 70-80ರ ಅವಧಿಯಲ್ಲಿ ಬಂದಂತಹ ಸಿನಿಮಾಗಳಿಂದ ಸ್ಪೂರ್ತಿಗೊಂಡಿದೆ.
ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಜನವರಿ 8, 1986 ರಂದು ಜನಿಸಿದ ರಾಕಿಂಗ್ ಸ್ಟಾರ್ ಯಶ್'ಗಿಂದು ಹುಟ್ಟುಹಬ್ಬದ ಸಂಭ್ರಮ. ನವೀನ್ ಕುಮಾರ್ ಗೌಡ ಇವರ ಮೊದಲ ಹೆಸರು. ಈ ಟಿವಿ ಚಾನೆಲ್ನಲ್ಲಿ ಪ್ರಸಾರವಗುತ್ತಿದ್ದ 'ನಂದ ಗೋಕುಲ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಮೊದಲ ಬಾರಿಗೆ ಅಭಿನಯಕ್ಕೆ ಪದಾರ್ಪಣೆ ಮಾಡಿದರು. 2008ರಲ್ಲಿ 'ಮೊಗ್ಗಿನ ಮನಸ್ಸು' ಚಿತ್ರದ ಖ್ಯಾತ ನಟನಾಗಿ ಹೊರಹೊಮ್ಮಿದ ಇವರು ಚಂದನವನದಲ್ಲಿ ರಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದರು.
ಬ್ಲಾಕ್ ಬಸ್ಟರ್ ಚಿತ್ರ 'ಕೆಜಿಎಫ್' ದಾಖಲೆಯ ಸಂಭ್ರಮದ ನಡುವೆ ಇಂದು ರಾಕಿಂಗ್ ಸ್ಟಾರ್ ಯಶ್ ಜನ್ಮದಿನ ಆಚರಿಸಲು ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ನಮ್ಮಕುಟುಂಬದ ಹಿರಿಯರಾದ ರೆಬಲ್ ಸ್ಟಾರ್ ಅಂಬರೀಶ್ ಅವರು ಕೆಲ ದಿನಗಳ ಹಿಂದಷ್ಟೇ ನಮ್ಮನ್ನ ಅಗಲಿದ್ದಾರೆ ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ, ಅಭಿಮಾನಿಗಳು ದಯವಿಟ್ಟು ಸಹಕರಿಸಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಯಶ್ ಮನವಿ ಮಾಡಿದ್ದರು. ಹಾಗಾಗಿ ಅಭಿಮಾನಿಗಳು ಇಂದು ಸೋಶಿಯಲ್ ಮೀಡಿಯಾದಲ್ಲಿ ಯಶ್ ಫೋಟೋ ಹಾಕುವುದರ ಮೂಲಕ ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.