ಹಿಂದಿ ರಾಷ್ಟ್ರ ಭಾಷೆ ಅಲ್ಲ: ಬಾಲಿವುಡ್ ಬಗ್ಗೆ ನಟ ಕಿಚ್ಚ ಸುದೀಪ್ ವ್ಯಂಗ್ಯ
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಕಿಚ್ಚ ಸುದೀಪ್ ಹಿಂದಿ ಭಾಷೆ ಮತ್ತು ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು: ಸದ್ಯ ಜಗತ್ತಿನಾದ್ಯಂತ ಸೌತ್ ಸಿನಿಮಾದ ಪ್ರಾಬಲ್ಯ ಎದ್ದು ಕಾಣುತ್ತಿದೆ. ದಕ್ಷಿಣದ ಚಿತ್ರಗಳು ಎಲ್ಲೆಡೆ ಬಿಡುಗಡೆಯಾಗಿ ಉತ್ತಮ ಹಣ ಗಳಿಸುತ್ತಿವೆ. ಏತನ್ಮಧ್ಯೆ, ಲಾಕ್‌ಡೌನ್ ನಂತರದ ಹಂತದಲ್ಲಿ ಬಾಲಿವುಡ್‌ನ ಹೊಳಪು ಸ್ವಲ್ಪ ಕೊಂಚ ಕಡಿಮೆಯಾಗಿದೆ. ಹಿಂದಿ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಬಾಕ್ಸ್ ಆಫೀಸ್‍ನಲ್ಲಿಯೂ ಬಾಲಿವುಡ್ ಸಿನಿಮಾಗಳು ಮೊದಲಿನಂತೆ ಸದ್ದು ಮಾಡುತ್ತಿಲ್ಲ.
ಸ್ಟಾರ್ ನಟರ ಹಿಂದಿ ಚಿತ್ರಗಳಿಗೆ ಮಾರ್ಕೆಟ್‍ನಲ್ಲಿ ಡಿಮ್ಯಾಂಡ್ ಕಡಿಮೆಯಾಗಿದೆ. ಸಲ್ಮಾನ್ ಖಾನ್ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿ, ಸೌತ್ ಸಿನಿಮಾಗಳನ್ನು ಹೊಗಳಿದ್ದರು. ಆದರೆ, ಇದೀಗ ನಟ ಕಿಚ್ಚ ಸುದೀಪ್ ಮಾತನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಹಿಂದಿ ಭಾಷೆ ಮತ್ತು ಅದರ ಜನಪ್ರಿಯತೆ ಬಗ್ಗೆ ಮಾತನಾಡಿದ್ದು, ಬಾಲಿವುಡ್ ಚಿತ್ರಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Viral Video: ಯಶ್ ಸ್ಟೈಲ್ ಕಾಪಿ ಮಾಡಿದ ನಟಿ ಶಿಲ್ಪಾ ಶೆಟ್ಟಿ
ಕಿಚ್ಚನ ವಿಡಿಯೋ ಸಖತ್ ವೈರಲ್
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಕಿಚ್ಚ ಸುದೀಪ್ ಹಿಂದಿ ಭಾಷೆ ಮತ್ತು ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಈ ಘಟನೆ ನಡೆದಿರುವುದು ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಕಾಂಬಿನೇಶನ್‍ನಲ್ಲಿ ಮೂಡಿಬರುತ್ತಿರುವ ‘I AM R’ ಸಿನಿಮಾದ ಟೈಟಲ್ ಬಿಡುಗಡೆ ಕಾರ್ಯಕ್ರಮದಲ್ಲಿ. ಈ ಸಂದರ್ಭದಲ್ಲಿ ಮಾತನಾಡಿದ್ದ RGV, ‘ನಾನು ಮೊದಲು ಮುಂಬೈಗೆ ಹೋದಾಗ ಅವರಿಗೆ ದಕ್ಷಿಣ ಭಾರತವೆಂದರೆ ಕೇವಲ ಮದ್ರಾಸಿಗಳು ಅಂತಾ ಗೊತ್ತಿತ್ತಷ್ಟೇ. ತಮಿಳರನ್ನೂ ಮದ್ರಾಸಿಗಳು ಎಂದು ಅವರು ಕರೆಯುತ್ತಿದ್ದರು’ ಎಂದು ತಮ್ಮ ಪ್ರಾರಂಭಿಕ ಸಿನಿ ಜರ್ನಿಯನ್ನು ಮೆಲಕು ಹಾಕಿದರು.
ಮುಂದುವರಿದು ಮಾತನಾಡಿದ್ದ RGV, ‘ಬಾಲಿವುಡ್‍ನವರಿಗೆ ಕನ್ನಡ ಮತ್ತು ಕರ್ನಾಟಕದ ವ್ಯತ್ಯಾಸವೂ ಗೊತ್ತಿರಲಿಲ್ಲ. ತೆಲುಗಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಈಗ ಹಿಂದಿ ಚಿತ್ರರಂಗದವರು ಕನ್ನಡದ ಬಗ್ಗೆ, ಕನ್ನಡ ಸಿನಿಮಾ ಕೆಜಿಎಫ್ ಬಗ್ಗೆ ಮಾತನಾಡುತ್ತಿದ್ದಾರೆ. ಗೆಲುವಿಗೆ ಇರುವ ಶಕ್ತಿಯೇ ಅದು ಎಂದು ಕೆಜಿಎಫ್ ಸಿನಿಮಾ, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರನ್ನು ಹೊಗಳಿದರು.
ಇದನ್ನೂ ಓದಿ: 'ಸೂರರೈ ಪೊಟ್ರು' ಹಿಂದಿಗೆ ರಿಮೇಕ್! ಕನ್ನಡಿಗ ಕ್ಯಾ.ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕುಮಾರ್
ಈ ವೇಳೆ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಕೇಳುತ್ತಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, 'ಹಿಂದಿ ರಾಷ್ಟ್ರಭಾಷೆ ಅಲ್ಲ' ಅಂತಾ ಹೇಳಿದರು. ಕನ್ನಡ ಚಿತ್ರರಂಗವನ್ನು ಹೊಗಳಿದ RGVಗೆ ಥ್ಯಾಂಕ್ಸ್ ಹೇಳಿದ ಸುದೀಪ್, ‘ಹಿಂದಿ ಅನ್ನೋದು ರಾಷ್ಟ್ರ ಭಾಷೆಯಲ್ಲ. ನಮ್ಮ ಕನ್ನಡ ಭಾಷೆಯಂತೆಯೇ ಅದೂ ಒಂದು ಭಾಷೆ ಅಷ್ಟೇ’ ಎಂದು ಹೇಳಿದರು. ಈ ವೇಳೆ ನೆರೆದಿದ್ದವರಿಂದ ಜೋರಾದ ಚಪ್ಪಾಳೆ ಕೇಳಿಬಂತು.
ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಈಗ ಶುರುವಾಗಿದ್ದಲ್ಲ. 1970ರಿಂದಲೇ ಪ್ಯಾನ್ ಇಂಡಿಯಾ ಸಿನಿಮಾಗಳು ಮೂಡಿಬಂದಿವೆ. ನಾವೆಲ್ಲ ಹಿಂದಿಗೆ ಹೋಗುತ್ತಿಲ್ಲ, ಬದಲಾಗಿ ಬಾಲಿವುಡ್‍ನವರೇ ಅವರ ಚಿತ್ರಗಳನ್ನು ಇಲ್ಲಿನ ಭಾಷೆಗಳಿಗೆ ಡಬ್ ಮಾಡುತ್ತಿದ್ದಾರೆ. ಅವರು ತೆಲುಗು-ತಮಿಳು ಮುಂತಾದ ದಕ್ಷಿಣ ಭಾರತದ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದ್ದಾರೆ. ಇಷ್ಟೇಲ್ಲಾ ಮಾಡಿದರೂ ಅವರು ಇನ್ನೂ ಹೆಣಗಾಡುತ್ತಿದ್ದಾರೆ. ಇಂದು ನಾವು ಇಡೀ ಪ್ರಪಂಚವೇ ಕುಳಿತು ನೋಡುವಂತಹ ಸಿನಿಮಾಗಳನ್ನು ಮಾಡುತ್ತಿದ್ದೇವೆ’ ಎಂದು ಹೇಳಿದರು.
ಹಿಂದಿ ಭಾಷೆ ಮತ್ತು ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ದಕ್ಷಿಣ ಭಾರತದಿಂದ ಆಗಾಗ ವಿರೋಧದ ಕೂಗು ಕೇಳಿಬರುತ್ತಿದೆ. ದೇಶವು ರಾಜಕೀಯ ಮತ್ತು ಸಾಮಾಜಿಕ ಚಳವಳಿಗಳನ್ನು ಕಂಡಿದೆ. ಪ್ರಸ್ತುತ ಹಿಂದಿ ಅಥವಾ ಅದರ ಅಗತ್ಯತೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೂ ಸಹ ಭಾರತದ ಬಹುಪಾಲು ಜನಸಂಖ್ಯೆಯು ಹಿಂದಿ ಮಾತನಾಡುವವರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.