ನಾದಬ್ರಹ್ಮ ಹಂಸಲೇಖ ನಡೆದು ಬಂದ ದಾರಿ
ಚಿತ್ರರಸಿಕರ ಮನಗೆದ್ದ ಅಪ್ರತಿಮ ಸಂಗೀತ ಮಾಂತ್ರಿಕ.. ಎಲ್ಲೂ ಅಶ್ಲೀಲದ ಸೋಂಕಿಲ್ಲ.. ಶೃಂಗಾರಕ್ಕೆ ಕೊರತೆಯಿಲ್ಲ... ಅರ್ಥ ಮಾಡಿಕೊಂಡರೆ ರೋಮಾಂಚನ.. ಉಳಿದವರಿಗೆ ಮೋಹಕ ಪದಸಿಂಚನ.. ಖುಷಿಯಲ್ಲಿ, ಅಳುವಿನಲ್ಲಿ, ಕೋಪದಲ್ಲಿ ಮನ ಕರಗಿಸುವ ಜಾದುಗಾರ.. ಇವರ ಒಂದೊಂದು ಸಾಲು ತಲೆಯಲ್ಲಿ ಕೂತರೆ ಅದು ಹೋಗೋದೆ ಇಲ್ಲ.. ʻಪ್ರೇಮಲೋಕ' ಸಿನಿಮಾದ ಹಾಡುಗಳನ್ನು ಕೇಳಿದೊಡನೆ ನಮಗೆ ನೆನಪಾಗುವುದು ಸಂಗೀತ ನಿರ್ದೇಶಕ ಹಂಸಲೇಖ. ಆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ನಾದಬ್ರಹ್ಮನ ಸಂಪೂರ್ಣ ಜೀವನ ಚಿತ್ರಣವನ್ನ ನಿಮಗೆ ಪರಿಚಯ ಮಾಡಿಸುತ್ತೇವೆ.
ಸಂಗೀತ ಮಾಂತ್ರಿಕ, ಕನ್ನಡ ಸಿನಿಲೋಕದ ಗಂಧರ್ವ, ಸ್ಯಾಂಡಲ್ವುಡ್‌ನ ನಾದ ಬ್ರಹ್ಮ ಅಂತಲೇ ಖ್ಯಾತಿ ಪಡೆದ ಸಂಗೀತ ನಿರ್ದೇಶಕ ಹಾಗೂ ಗೀತ ರಚನಕಾರ ಹಂಸಲೇಖ ಅವರು. ತಮ್ಮ ಮನೋಹರವಾದ ಸಂಗೀತದಿಂದ ಕನ್ನಡ ಚಿತ್ರರಂಗವನ್ನ ಮತ್ತೊಂದು ಹತ್ತಕ್ಕೆ ಬೆಳೆಯುವಂತೆ ಮಾಡಿದವರು ಹಂಸಲೇಖ ಎಂದರೆ ತಪ್ಪಾಗಲಾರದು. ಜಾನಪದ ಹಾಗೂ ಸಿನಿಮಾ ಹಾಡುಗಳನ್ನ ರಚಿಸುವುದರಲ್ಲಿ ಸೈ ಎನಿಸಿಕೊಂಡಿರುವವರು.
ಒಂದು ಕಾಲದಲ್ಲಿ ಹಂಸಲೇಖ ಅವರ ಹಾಡುಗಳು ಎಷ್ಟು ಪ್ರಸಿದ್ಧಿ ಪಡೆದಿದ್ದವು ಎಂದರೆ, ಇವರು ಸಂಯೋಜಿಸಿದ ಅದ್ಭುತ ಹಾಡುಗಳಿಂದಲೇ ಅದೆಷ್ಟೋ ಚಿತ್ರಗಳು ಗೆಲ್ಲುತ್ತಿದ್ದವು ಎಂದು ಹೇಳಿದ್ರೆ ತಪ್ಪಾಗಲಾರದು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷಾ ಚಿತ್ರಗಳಿಗೆ ಸಂಗೀತ ಹಾಗೂ ಸಾಹಿತ್ಯ ನೀಡಿದ್ದಾರೆ. ತಮ್ಮ ಸಂಗೀತದಿಂದಾಗಿಯೇ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಇವರು ಕನ್ನಡ ಚಿತ್ರರಂಗದಲ್ಲಿ ನಾದಬ್ರಹ್ಮ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ನಾನು ನನ್ನ ಹೆಂಡತಿ ಸಿನಿಮಾದ ಸಂಭಾಷಣೆ, ಪ್ರೇಮಲೋಕ, ರಣಧೀರ, ಯುಗಪುರುಷ ಮತ್ತು ಆಕಸ್ಮಿಕ ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ, ಹಿನ್ನೆಲೆ ಗಾಯಕರಾಗಿ ಹಾಗೂ ಚಿತ್ರ ಸಾಹಿತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಯಾರೆ ನೀನು ರೋಜಾ ಹೂವೇನೇ ಆಗಲಿ, ನೀನೇನಾ ಭಗವಂತನೇ ಆಗಲಿ, ಈ ಬಾಳು ಬಣ್ಣದ ಬುಗುರಿಯೇ ಆಗಲಿ, ಆಗುಂಬೆಯಾ ಈ ಸಂಜೆಯೇ ಆಗಲಿ... ಆ ಮಾಂತ್ರಿಕ ಸ್ಪರ್ಶದಿಂದ ಕೇಳುಗರು ಮಂತ್ರಮುಗ್ಧರಾಗುತ್ತಾರೆ. ಜೀವನದ ದೊಡ್ಡ ಘಟ್ಟಗಳಲ್ಲಿ, ಖುಷಿಯಲ್ಲಿ, ಅಳುವಿನಲ್ಲಿ, ಕೋಪದಲ್ಲಿ ನಮ್ಮಂತಹ ತುಂಬಾ ಜನರನ್ನ ಪೊರೆದ್ದದ್ದು ಹಂಸಲೇಖರ ಸಾಲುಗಳೇ. ಕೆಳಗೆ ಬಿದ್ದಾಗ "ಈ ಭೂಮಿ ಬಣ್ಣದ ಬುಗುರಿ" ಹಾಡು, "ಮರೆತಾಗ ಜೀವ ಪಾಠ, ಕೊಡುತ್ತಾನೆ, ಖುಷಿಯಾದಾಗ "ಶ್ರೀಗಂಧ"ದ ಹಾಡು, ಅಳುವಾಗ "ಪ್ರೇಮ ಗೀಮ ಜಾನೆ ದೋ" ಅನ್ನೋ ಹಾಡು, ಹತಾಶೆಯಾದಾಗ "ಯಾರಿಗೆ ಬೇಕು ಈ ಲೋಕ" ಎಂದು ಜೋರಾಗಿ ಹಾಡಿದ ಎಷ್ಟೋ ಸಂದರ್ಭಗಳು ಬಂದಿವೆ. ಎಲ್ಲಾ ಹಾಡಿನಲ್ಲೂ ಒಂದೊಂದು ಸಾಲು ತಲೆಯಲ್ಲಿ ಕೂತರೆ ಅದು ಹೋಗೋದೆ ಇಲ್ಲ.
ಒಂದು ಸನ್ನಿವೇಶ ಹೇಳಿದ ತಕ್ಷಣ ಅದಕ್ಕೆ ತಕ್ಕ ಹಾಡು ಹೊಸೆಯುತ್ತಲೇ ಸಂಗೀತ ಸಂಯೋಜಿಸುತ್ತಿದ್ದವರು ಹಂಸಲೇಖ. ಬಹುಶಃ ಭಾರತೀಯ ಚಿತ್ರರಂಗದಲ್ಲೇ ಅಷ್ಟೊಂದು ಹಾಡುಗಳಿಗೆ ಸಂಗೀತ ಮತ್ತು ಸಾಹಿತ್ಯ ಎರಡನ್ನೂ ನೀಡಿದವರು ಮತ್ತೊಬ್ಬರು ಸಿಗಲಿಕ್ಕಿಲ್ಲ. ಹಂಸಲೇಖ ಒಳ್ಳೆಯ ಲಹರಿಯಲ್ಲಿದ್ದರೆ ಒಂದು ಒಳ್ಳೆಯ ಕವಿತೆ ಹುಟ್ಟಿತೆಂದೇ ಅರ್ಥ. ಹಂಸಲೇಖರ ಪ್ರತಿಭೆ ಒಂದು ಕಡೆಯಾದರೆ, ಅವರ ಪದಗಳನ್ನು, ಲಾಲಿತ್ಯವನ್ನು ಮತ್ತು ಅವರ ಕವಿತೆಗಳು ಹಿಡಿದಿಡುವ ಅರ್ಥವನ್ನು ಗ್ರಹಿಸಲಾರದ ಅಪ್ರತಿಭ ಪಡೆ ಮತ್ತೊಂದು ಕಡೆ. ಹಂಸಲೇಖ ಸಾಹಿತ್ಯ ಮತ್ತು ಸಂಗೀತವನ್ನು ಮೆಚ್ಚಿಕೊಂಡಾಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅವರ ಹಾಡುಗಳಲ್ಲಿ ಎಲ್ಲೂ ಅಶ್ಲೀಲದ ಸೋಂಕಿಲ್ಲ, ಶೃಂಗಾರಕ್ಕೆ ಕೊರತೆಯಿಲ್ಲ. ಅರ್ಥ ಮಾಡಿಕೊಂಡರೆ ರೋಮಾಂಚನ, ಉಳಿದವರಿಗೆ ಮೋಹಕ ಪದಸಿಂಚನ ಎನ್ನುವಂತ್ತಿದ್ದವು ಅವರ ಹಾಡುಗಳು. ಒಂಚೂರು ಪೋಲೀತನ, ಒಂದಿಷ್ಟು ಹತಾಶೆ, ಪಂಚೇರು ಜೀವ, ಅರೆಪಾವು ಗುಂಡಿಗೆ, ಇದನ್ನೆಲ್ಲ ಮೀರಿದವನು ಎಂಬ ಒಳಸತ್ಯ, ಈಸಬೇಕು ಇದ್ದು ಜೈಸಬೇಕು ಎಂಬ ನಿತ್ಯಸತ್ಯ, ಒಂದು ದಿವ್ಯನಿರ್ಲಕ್ಷ್ಯ ಹಾಗೂ ಅಪ್ಪಟ ವ್ಯಾವಹಾರಿಕತೆಯ ಜೊತೆಗೇ ಹಂಸಲೇಖ ನಮಗೆ ಎದುರಾಗುತ್ತಾರೆ. ದೂರದಿಂದ ನೋಡುವವರ ಪಾಲಿಗೆ ಅವರು ಒಳ್ಳೆಯ ಹಾಡುಗಳನ್ನು ಬರೆದ ಗೀತರಚನಕಾರ. ಸಮೀಪದಿಂದ ನೋಡಿದವರ ಪಾಲಿಗೆ ಅರ್ಥವೇ ಆಗದ ಒಗಟು, ಶಿಷ್ಯಂದಿರ ಪಾಲಿಗೆ ಎಷ್ಟು ಕಲಿತರೂ ಮುಗಿಯದ ವಿದ್ಯಾಸಾಗರ, ಸಿನಿಮಾದವರ ಪಾಲಿಗೆ ಒಂದು ಕಾಲಕ್ಕೆ ಕೇಳಿದ್ದನ್ನು ಕೊಡುವ ಕಲ್ಪವೃಕ್ಷ, ಇವತ್ತು ಕೇಳಿದರೂ ಕೊಡದ ಬಿರು ಆಕಾಶ. ಹಂಸಲೇಖ ಇನ್ನೂ ಏನೇನೋ ಮಾಡಬಹುದಾಗಿತ್ತು ಎಂದು ಅನಿಸುವ ಹೊತ್ತಿಗೇ, ಅವರ ಮೊದಲ ಗೀತೆ ನೆನಪಾಗುತ್ತದೆ. ನೀನೇನಾ ಭಗವಂತಾ ಎಂದು ಯಾರೋ ಕೇಳಿದಂತಾಗುತ್ತದೆ.
1987ರಲ್ಲಿ ತೆರೆ ಕಂಡ ಪ್ರೇಮಲೋಕ ಸಿನಿಮಾದ ಮೂಲಕ ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಿ ಪರಿಚಯವಾದ ಹಂಸಲೇಖ ಅವರು, ಚಿತ್ರರಂಗಕ್ಕೆ ಹೊಸ ಟ್ರೆಂಡ್ ಸೃಷ್ಟಿಸಿದರು. 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಹಂಸಲೇಖ ಅವರ ಹಾಡುಗಳನ್ನು ಕೇಳುತ್ತಲೇ ಪ್ರೀತಿಯಲ್ಲಿ ಬಿದ್ದವರು ಸಾಕಷ್ಟು ಮಂದಿ ಇದ್ದಾರೆ. ರವಿಚಂದ್ರನ್ ಹಾಗೂ ಹಂಸಲೇಖ ಅವರ ಜೋಡಿ 12 ವರ್ಷಗಳ ಕಾಲ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿತ್ತು. ಪ್ರೇಮಲೋಕ ಸಿನಿಮಾದಲ್ಲಿ ರವಿಚಂದ್ರನ್ ಅಭಿನಯಿಸಿದರೆ, ಹಂಸಲೇಖ ಸಂಗೀತ ನೀಡಿದ್ದರು, ಈ ಸನಿಮಾದಲ್ಲಿ ಬಾಲಸುಬ್ರಹ್ಮಣ್ಯಂ ಹಾಗೂ ಹಂಸಲೇಖ ಅವರ ಮಡದಿ ಲತಾ ಅವರು ಹಾಡು ಹಾಡಿದ್ದಾರೆ. ಪ್ರೇಮಲೋಕ ಸಿನಿಮಾ ಹಂಸಲೇಖ ಅವರ ಸಾಮರ್ಥ್ಯವನ್ನು ಸಿನಿರಂಗಕ್ಕೆ ತೋರಿಸಿಕೊಟ್ಟಿತ್ತು. ನಂತರ ರವಿಚಂದ್ರನ್ ಹಾಗೂ ಹಂಸಲೇಖ ಅವರ ಜೋಡಿ ಕನ್ನಡ ಸಾಂಡಲ್ವುಡ್‌ನಲ್ಲಿ ಹಲವು ವರ್ಷಗಳ ರಾಜ್ಯಭಾರ ಮಾಡಿತ್ತು. ರಾಮಚಾರಿ, ರಣಧೀರ, ಹಳಿಮೇಷ್ಟ್ರು ಹೀಗೆ ಹಲವಾರು ಸಿನಿಮಾಗಳಲ್ಲಿ ಈ ಜೋಡಿ ರಂಜಿಸಿತ್ತು.
ಪ್ರೇಮ ಲೋಕ ಚಿತ್ರದ ನೋಡಮ್ಮ ಹುಡುಗಿ, ಪ್ರೇಮಲೋಕದಿಂದ, ಹೇ ಗಂಗೂ, ಮೋಸಗಾರನ, ಈ ನಿಂಬೆ ಹಣ್ಣಿನಂತ ಹಾಡುಗಳು ಪಡ್ಡೆಹುಡುಗರನ್ನು ಹುಚ್ಚೆಬಿಸಿದವು..., ನಂತರ ಬಿಡುಗಡೆಯಾದ ಹಂಸರವಿ ಜೋಡಿಯ ಚಿತ್ರ ರಣಧೀರ, ಈ ಚಿತ್ರದಲ್ಲಿ ಲೋಕವೆ ಹೇಳಿದ ಮಾತಿದು, ನಾವಿಂದು ಹಾಡೋ ಹಾಡಿಗೆ, ಬಾ ಬಾರೋ ರಣಧೀರ ಗೀತೆಗಳು ಮತ್ತೊಂದು ಪ್ರೇಮ ಲೋಕವನ್ನಾಗಿಸಿತು, ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂದು ಸಾರುವ ಮೂಲಕ ನಾಡಿನ ಯುವ ಪ್ರೇಮಿಗಳ ಪಾಲಿನ ಲವ್ ಗುರು ಎನಿಸಿಕೊಂಡವರು ಹಂಸಲೇಖಾ..., ಈ ಮೇಲಿನ ಎರಡು ಸೂಪರ್ ಹಿಟ್ ಚಿತ್ರಗಳ ನಂತರ ಹಂಸ್-ರವಿ ಜೋಡಿ ಮತ್ತೆ ಹಿಂದಿರುಗಿ ನೋಡಲೇ ಇಲ್ಲ, ನಂತರ ಬಂದ ಯಶಸ್ವಿ ಚಿತ್ರಗಳು “ಅಂಜದಗಂಡು ಸಿನಿಮಾದಲ್ಲಿ ಏಕೆ ಹೀಗಾಯ್ತೊ ಮತ್ತು ಪ್ರೀತಿಯಲ್ಲಿ ಇರೊ ಸುಖ ಹಾಡು ಹಂಸಲೇಖ ತಾನೊಬ್ಬ ವಿಶೇಷ ಸಾಹಿತಿ ಅನ್ನೊದು ಕೂಡ ಸಾಬೀತುಪಡಿಸಿದರು. ಶಾಂತಿ ಕ್ರಾಂತಿಯಲ್ಲಿ ಅರ್ಧ ರಾತ್ರಿಲಿ ಹೈವೆ ರೋಡಲ್ಲಿ ಎಂಬ ಹಾಡಿನಲ್ಲಿ ತಮ್ಮ ವಿಭಿನ್ನತೆ ಮೆರೆದರು...., ಯುದ್ಧಕಾಂಡ ಸಿನಿಮಾದಲ್ಲಿ ಸೋಲೇ ಇಲ್ಲ.... ಸ್ಪರ್ಶ ಸಿನಿಮಾದಲ್ಲಿ ಚಂದಕಿಂತ ಚಂದ ನೀನೆ ಸುಂದರ, ಪ್ರೀತ್ಸೆ... ಪ್ರೀತ್ಸೆ..., ಯಾರಿಟ್ಟರೀ ಚುಕ್ಕಿ...., ಹಳ್ಳಿಮೇಷ್ಟ್ರೇ ... ಹಳಿಮೇಷ್ಟ್ರೇ ..., ಕಾಯಿ ಕಾಯಿ ನುಗ್ಗೆಕಾಯಿ.... ಎಳೆ ಹೊಂಬಿಸಿಲೇ... ಒಂದೊಂದು ಹಾಡುಗಳು ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯ ಸಂಗೀತ ಪ್ರಿಯರನ್ನು ತೇಲುವಂತೆ ಮಾಡಿತ್ತು. ಸ್ಯಾಂಡಲ್ವುಡ್ನಲ್ಲಿ ನನ್ನ ಸಿನಿಮಾ ಸಂಗಾತಿ ಕ್ರೇಜಿಸ್ಟಾರ್ ರವಿಚಂದ್ರನ್, ನನ್ನ ಸಂಗೀತದ ಸಂಗಾತಿ ಎಸ್.ಪಿ.ಬಿ ಎಂದು ಹಂಸಲೇಖ ಈ ಹಿಂದೆ ಹೇಳಿಕೊಂಡಿದ್ದರು. ಬಾಲಸುಬ್ರಹ್ಮಣ್ಯಂ ಅವರು ಅಗಲಿದಾಗಲೂ ಅವರಿಲ್ಲದೆ ಉಳಿದ ಜೀವನ ಬದುಕುವುದು ತುಂಬಾ ಕಷ್ಟ ಎಂದಿದ್ದರು ನಾದಬ್ರಹ್ಮ. ಬಹುಷ್ಯ ಕನ್ನಡ ಚಿತ್ರರಂಗದಲ್ಲಿ ಎಂದು ಕೇಳರಿಯದಂತಹ ಸಂಪೂರ್ಣ ಹೊಸತನದಿಂದ ಕೂಡಿದ ಸಾಹಿತ್ಯ ಹಾಗೂ ಸಂಗೀತ ಈ ಚಿತ್ರದ ಹಾಡುಗಳು ಈ ಮಟ್ಟಿಗೆ ಜನಪ್ರಿಯವಾಗಲು ಕಾರಣವಾಯಿತು. ಇದರೊಂದಿಗೆ ರವಿಚಂದ್ರನ್ ಈ ಚಿತ್ರದ ಹಾಡುಗಳನ್ನು ಚಿತ್ರೀಕರಿಸಿದ ರೀತಿ ನಿಜಕ್ಕು ಅದ್ಭುತ. ರವಿಚಂದ್ರನ್- ಹಂಸ ಜೋಡಿ ಈ ಮಟ್ಟಕ್ಕೆ ಯಶಸ್ವಿಯಾಗಲು ಕಾರಣ, ಒಬ್ಬರ ಮೇಲೆ ಇನ್ನೊಬ್ಬರಿಗಿದ್ದ ನಂಬಿಕೆ ಹಾಗೂ ಸೂಪರ್ ಎನ್ನುವಂತ ಕೆಮಿಸ್ಟ್ರಿ . ಇದರಿಂದಲೇ ಏನೊ ʻಬಣ್ಣದ ಗೆಜ್ಜೆʼ ಎಂಬ ಬಹು ನೀರೀಕ್ಷಿತ ಚಿತ್ರ ಹೀನಾಯ ಸೋಲು ಕಂಡಾಗಲು ಆ ಚಿತ್ರದ ಹಾಡುಗಳು ಭಾರಿ ಯಶಸ್ಸು ಗಳಿಸಿತು, ಪ್ರೇಯಸಿ ಇಂದ ಮೊಸಗೊಳಗಾದ ಪ್ರಿಯತಮನ ವಿಷಾದ ಗೀತೆಯಾಗಿ ಮೂಡಿಬಂದ “ಪ್ರೇಮಾ ಗೀಮ ಜಾನೆದೊ” ಹಾಗೂ ಬರೀ ಮಳೆಯಲ್ಲೇ ಚಿತ್ರೀಕರಿಸಲ್ಪಟ್ಟ “ಸ್ವಾತಿ ಮುತ್ತಿನ ಮಳೆ ಹನಿಯೊ” ಹಾಡುಗಳು ಇಂದಿಗೂ ಕನ್ನಡ ಟಿ. ವಿ ಚಾನಲ್ ಗಳಲ್ಲಿ ನಿತ್ಯವೂ ಪ್ರಸಾರವಾಗುತ್ತಿವೆ.
‘ಪ್ರೇಮಲೋಕ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೃಷ್ಟಿಸಿದ ಹಂಸಲೇಖಾರವರು. ಆ ಮೇಲೆ ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ಎರಡು ಪಾಳಿಯಂತೆ ಕೆಲಸ ಮಾಡಲು ಆರಂಭಿಸಿದರು. ಹಂಸಲೇಖ ಅವರ ಹಾಡಿನ ಸಂಯೋಜನೆಗೆ ಬೇಡಿಕೆ ಎಷ್ಟಿತ್ತೆಂದರೆ ಸಿನಿಮಾಗಳು ಸಾಲು ಸಾಲಾಗಿ ಅವರ ಡೇಟ್‌ಗಾಗಿ ಕಾಯಬೇಕಿತ್ತು. ವರ್ಷದಲ್ಲಿ ಬಿಡುಗಡೆಯಾಗುತ್ತಿದ್ದ ಚಿತ್ರಗಳಲ್ಲಿ ಶೇಕಡಾ ಮುಕ್ಕಾಲು ಚಿತ್ರಗಳು ಇವರದೇ ಆಗಿತ್ತು ಎಂದರೆ ಹುಡುಗಾಟದ ವಿಷಯವೇ ಅಲ್ಲ. ಪ್ರತಿ ಸಿನಿಮಾ ಹಾಡಿನಲ್ಲಿ ಅವರ ಕಠಿಣ ಶ್ರಮ, ಶ್ರದ್ದೆ ಎದ್ದು ಕಾಣುತ್ತಿತ್ತು. ಹಂಸಲೇಖ ರವರ ಆಕರ್ಷಕ ಸಿಗ್ನೇಚರ್ ಕೇವಲ ಅಭಿಮಾನಿಗಳಿಗಷ್ಟೇ ಅಲ್ಲ. ಎಲ್ಲಾ ನಿರ್ಮಾಪಕರಿಗೂ, ನಿರ್ದೇಶಕರಿಗೂ ಹಾಗೂ ನಟರಿಗೂ ಬೇಕಿತ್ತು. ಎಲ್ಲಾ ಸಿನಿಮಾ ಹಾಡಿನ ಕ್ಯಾಸೆಟ್ಟುಗಳಲ್ಲಿ ಹಂಸಲೇಖ ಅವರ ಸಿಗ್ನೇಚೆರ್ ಇದ್ದರೇ ಕೊಳ್ಳುವರ ಸಂಖ್ಯೆ ಹೆಚ್ಚುತ್ತಿತ್ತು. ಸುಮಾರು 500ಕ್ಕೂ ಹೆಚ್ಚು ಚಲನಚಿತ್ರಗಳಿಗೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತವನ್ನು ನೀಡಿದ್ದಾರೆ.
ಆದ್ರೆ, 1998 ನಂತರ ಹಂಸ-ರವಿ ಸ್ನೇಹದಲ್ಲಿ ಬಿರುಕು ಕಾಣಲಾರಂಭಿಸಿತು. ಇದೆ ಕಾರಣಕ್ಕೆ ಏನೊ ಅವರಿಬ್ಬರು ಕಳೆದ 12 ವರ್ಷಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಚಿತ್ರಗಳು ಕೇವಲ ಮೂರು, 1998ರಲ್ಲಿ ತೆರಕಂಡ “ಯಾರೆ ನೀನು ಚೆಲುವೆ” 99ರ “ಪ್ರೀತ್ಸೋದ್ ತಪ್ಪಾ” ಹಾಗೂ 2003 ರಲ್ಲಿ ನಾಲ್ಕು ವರ್ಷದ ನಂತರ ಬಿಡುಗಡೆಯಾದ “ಒಂದಾಗೋಣ ಬಾ” ಕನ್ನಡ ಚಿತ್ರರಂಗದಲ್ಲಿ ರಾಮ-ಲಕ್ಷ್ಮಣರಂತೆ ಬಾಳಿದ ಈ ಜೋಡಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ನಿಜಕ್ಕೂ ನೊವಿನ ಸಂಗತಿ,
ಪ್ರೇಕ್ಷಕರ ಮನಗೆದ್ದ ʻಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕುʼ ಎಂಬ ಹಾಡು
ಡಾ. ರಾಜ್ ಅವರು ಹಾಡಿದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…” ಹಾಡು ಎಷ್ಟು ಜನಪ್ರಿಯವಾಯಿತ್ತೆಂದರೆ ಪ್ರೇಕ್ಷಕರ ಮೆಚ್ಚುಗೆಯನ್ನು ಕಂಡು ಎಷ್ಟೋ ಥೀಯೇಟರ್ ಮಾಲೀಕರು ಆ ಹಾಡನ್ನು ಎರಡೆರಡು ಸಲ ಪ್ರದರ್ಶಿಸಿದ್ದ ಉದಾಹರಣೆಯೂ ಇದ್ದೆ. ಅಣ್ಣಾವ್ರು ಹಾಗೂ ಹಂಸಲೇಖ ಅವರ ನಡುವಿನ ಬಾಂಧವ್ಯ ಸಂಗೀತದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತು. ಒಮ್ಮೆ “ಮುತ್ತಿನ ಹಾರ” ಸಿನಿಮಾದ ಹಾಡಿನ ಧ್ವನಿ ಮುದ್ರಿಕೆ ಸಮಯದಲ್ಲಿ ಸಂಗೀತ ದಿಗ್ಗಜ ಶ್ರೀ ಬಾಲಮುರಳಿ ಕೃಷ್ಣರವರು “ದೇವರು ಹೊಸೆದ ಪ್ರೇಮದ ದಾರ” ಹಾಡನ್ನು ಹಾಡಲೆಂದು ಬಂದಿದ್ದರು. ಆ ಹಾಡನ್ನು ಓದುವಾಗ ಆ ಹಾಡಿನಲ್ಲಿ ಒಂದು ಸಣ್ಣ ತಿದ್ದು ಪಡಿ ಇತ್ತು. ಆಗ ಆ ಹಾಡನ್ನು ಬರೆದ ಕವಿಯನ್ನು ಕರೆಯಿರಿ ಎಂದು ಹಂಸಲೇಖ ಅವರಿಗೆ ಹೇಳಿದರಂತೆ. ಆಗ ನಾದಬ್ರಹ್ಮ ತುಟಿ ಪಿಟಕ್ ಅನ್ನದೆ ಕಿವಿಯಲ್ಲಿಟ್ಟುಕೊಂಡಿದ್ದ ಪೆನ್ನು ಹಿಡಿದು ಬಾಲಮುರಳಿ ಅವರ ಮುಂದೆ ಬಂದರಂತೆ. ‘ಗುರುಗಳೇ ಹೇಳಿ…’ ಎಂದು ತಿದ್ದಲು ಮುಂದಾದಾಗ, ಬಾಲಮುರಳೀಯವರು ಕೋಪದಿಂದ ‘ಇಲ್ಲ… ನನಗೆ ಇದನ್ನು ಬರೆದ ಕವಿಯೇ ಬೇಕು ಅವರನ್ನೇ ಕರೆಯಿಸಿ’ ಎಂದರಂತೆ. ಹಂಸಲೇಖರವರು ಅವರು ಮುಗ್ದ ನಗುವನ್ನು ಚಲ್ಲುತ್ತಾ ‘ನಾನೇ ಸ್ವಾಮಿ ಈ ಸಾಹಿತ್ಯ ಬರೆದವನು’ ಎಂದಾಗ ಬಾಲಾಮುರಳಿಯವರ ಆಶ್ಚರ್ಯಚಕಿತರಾದರು. ಮತ್ತು ಪ್ರೀತಿಯಿಂದ ಬಿಗಿದಪ್ಪಿ ಅವರನ್ನು ಆಶೀರ್ವದಿಸಿದರಂತೆ. ಅಂದಿನ ಈ ಹಾಡು ಎಂದೆಂದೂ ಅಮರವಾಗಿ ಎಲ್ಲರ ಬಾಯಲ್ಲಿ ಗುನುಗುನಿಸುತ್ತದೆ.
ʻಹೆಣ್ಣನ್ನು ನೋಡುವ ದೃಷ್ಟಿ' ಗೀತೆಗಳ ಮೂಲಕ ಸೃಷ್ಟಿ
ಸಮಾಜದಲ್ಲಿ ವಿವಿಧ ಪ್ರಕಾರದ ಜನ ʻಹೆಣ್ಣನ್ನು ನೋಡುವ ದೃಷ್ಟಿ' ಹೇಗಿರುತ್ತದೆ ಎಂಬುದನ್ನು ʻಹಂಸ'ಗೀತೆಗಳಾದ ʻಈ ನಿಂಬೆ ಹಣ್ಣಿನಂಥ ಹುಡುಗಿ', ʻಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು', ʻಬಂಗಾರದಿಂದ ಬಣ್ಣಾನ ತಂದ...'ದಂಥ ಹಾಡುಗಳ ಮೂಲಕ ಆರಂಭಿಸಿದ ಹಂಸಲೇಖಾ ತುಂಟತನ, ನವಿರು ಪ್ರೇಮದ ಲೇಪದೊಂದಿಗೆ ಕೇಳುಗರಿಗೆ ಕಚಗುಳಿ ಇಟ್ಟಿತು. ನಂತರದ ಹಂತದಲ್ಲಿ ʻಎಲೆ ಹೊಂಬಿಸಿಲೆ', ʻಒಂದೆ ಉಸಿರಂತೆ ಇನ್ನು ನಾನು ನೀನು', ʻಪ್ರೀತಿ ಮಾಡಬಾರದು..', 'ಪುಟ್ಟಮಲ್ಲಿ ಪುಟ್ಟಮಲ್ಲಿ..'ನಂಥ ಹಾಡುಗಳ ಮೂಲಕ ಪ್ರೌಢ ಪ್ರೇಮದ ಪರಿಚಯ ಮಾಡಿಕೊಟ್ಟಿತು. ಹಂಸಲೇಖ ಅವರಿಗೆ ಅಪಾರ ಜನಪ್ರಿಯತೆ ಹಾಗೂ ಪುರಸ್ಕಾರಗಳನ್ನು ತಂದುಕೊಟ್ಟ ಚಲನಚಿತ್ರಗಳ ʻಆಕಾಶದಾಗೆ ಯಾರೋ ಮಾಯಗಾರನು', ʻಗೀತಾಂಜಲಿ...', ʻಈ ಭೂಮಿ ಬಣ್ಣದ ಬುಗುರಿ', ʻಪ್ರೀತಿಯಲ್ಲಿ ಇರೋ ಸುಖ...' ಮತ್ತಿತರ ಹಾಡುಗಳು ಅವರ ಸಂಗೀತ ಹಾಗೂ ಸಾಹಿತ್ಯ ರಚನೆಯ ವಿಸ್ತಾರವನ್ನು ಸಿಂಗಪುರ ಕನ್ನಡಿಗರೆದುರು ಹರಡಿದ್ದಲ್ಲದೇ, ಅವರೆಲ್ಲರನ್ನು ನೆನಪುಗಳ ಅಲೆಯ ಮೇಲೆ ತೇಲಿಸಿದವು.
ಸಂಗೀತ ನಿರ್ದೇಶನಕ್ಕಾಗಿ ಒಲಿದು ಬಂದ ಅತ್ಯುತ್ತಮ ಪ್ರಶಸ್ತಿಗಳು
ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ 6 ರಾಜ್ಯ ಪ್ರಶಸ್ತಿ, ಒಂದು ರಾಷ್ಟ್ರಪ್ರಶಸ್ತಿ. ಸಾಹಿತ್ಯಕ್ಕಾಗಿ ಮೂರು ಬಾರಿ ರಾಜ್ಯ ಪ್ರಶಸ್ತಿ, ಮೂರು ಫಿಲ್ಮ್‌ಫೇರ್ ಅವಾರ್ಡ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಇವೆಲ್ಲವೂ ಇವರನ್ನು ಹುಡುಕಿಕೊಂಡು ಬಂದವು. “ಗಂಗವ್ವ ಗಂಗಾಮಾಯಿ” ಸಂಗೀತಕ್ಕೆ ರಾಷ್ಟ್ರಪ್ರಶಸ್ತಿ, ಹಾಲುಂಡ ತವರು, ಶ್ರೀ ಮಂಜುನಾಥ ಚಿತ್ರಗಳಿಗೆ ರಾಜ್ಯಪ್ರಶಸ್ತಿ, ಫಿಲಂಫೇರ್ ಹಾಗೂ ಇನ್ನು ಅನೇಕ ಪ್ರಶಸ್ತಿಗಳು ಹಂಸಲೇಖರವರ ಕೈ ಸೇರಿದೆ.
ಕನ್ನಡ ಚಿತ್ರರಂಗಕ್ಕೆ ತಮ್ಮ ಸಾಹಿತ್ಯ, ಸಂಗೀತ, ಮಾತು, ವಿಚಾರಗಳ ಮೂಲಕ ಜನರನ್ನು ತನ್ಮಯಗೊಳಿಸುತ್ತಾ, ಅವಶ್ಯವಿದ್ದಾಗ ಬಡಿದೆಬ್ಬಿಸುತ್ತಾ ಸುಮಾರು ದಶಕಗಳಿಂದ ಕನ್ನಡದ ಸೇವೆ ಮಾಡುತ್ತಿರುವ ಸಂಗೀತದ ಮಹಾಗುರುಗಳಾದ ನಾದಬ್ರಹ್ಮ ಹಂಸಲೇಖರ ಕೊಡುಗೆ ಅನ್ಯನ್ಯ. ಆದ್ರೆ ಇವರು ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದೆ ಹೇಗೆ..?
ಸ್ಯಾಂಡಲ್ ವುಡ್‌ನಲ್ಲಿ ಸಂಗೀತದ ನಾದಬ್ರಹ್ಮ ಅಂತಲೇ ಹೆಸರು ಪಡೆದಿರೋ ಹಂಸಲೇಖರ ಮೊದಲ ಹೆಸರು ಗೋವಿಂದ ರಾಜು. ಈ ಗೋವಿಂದ ರಾಜು ಹೆಸರು ಹಂಸಲೇಖ ಆಗಿ ಬದಲಾದದ್ದು ಹೇಗೆ..? ಓದು ಮುಗಿಸಿ ತಂದೆಯ ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸಕ್ಕೆ ಸೇರಿದ ಗೋವಿಂದರಾಜು, ಬಣ್ಣದ ಲೋಕಕ್ಕೆ ಬಂದು ಒಂದಿಡೀ ವರ್ಷಗಳ ಕಾಲ ಕನ್ನಡ ಸಿನಿ ರಂಗದ ಸಂಗೀತ ಲೋಕದಲ್ಲಿ ರಾಜ್ಯಭಾರ ಮಾಡಿದ್ದು ಹೇಗೆ.. ನೀವೇ ನೋಡಿ...
1951 ಜೂನ್ 23 ರಂದು ಮಂಡ್ಯದಲ್ಲಿ ಕೆ.ಎಚ್.ಗೋವಿಂದರಾಜು ಮತ್ತು ರಾಜಮ್ಮ ದಂಪತಿಗಳಿಗೆ ಜನಿಸಿದ ಹಂಸಲೇಖರ ಮೊದಲ ಹೆಸರು ಗೋವಿಂದರಾಜು ಗಂಗರಾಜು. ಓದು ಮುಗಿಸಿ ತಂದೆಯ ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸಕ್ಕೆ ಸೇರಿದ ಗೋವಿಂದರಾಜು, ಆಗಾಗ್ಗೆ ಕವನಗಳನ್ನು ಬರೆಯುತ್ತಿದ್ದರು. ಅದೇ ವೇಳೆ ಅಣ್ಣನ ಆರ್ಕೆಸ್ಟ್ರಾ ತಂಡಕ್ಕೂ ಸೇರಿದರು. ತಮ್ಮ ಗುರುಗಳಾದ ಲಾವಣಿ ನೀಲಕಂಠಪ್ಪ ನೀಡಿದ ʻಹಂಸʼ ಕಂಪನಿಯ ಲೇಖನಿಯಿಂದ ಕವಿತೆಗಳನ್ನು ಬರೆಯುತ್ತಿದ್ದರಿಂದ ಸ್ವತ: ʻಹಂಸಲೇಖನಿ' ಎಂದು ಹೆಸರು ಬದಲಿಸಿಕೊಂಡರು. ಕೆಲವು ದಿನಗಳ ನಂತರ ಅವರ ಗುರುಗಳು ಆ ಹೆಸರನ್ನು ʻಹಂಸಲೇಖ' ಎಂದು ಬದಲಿಸಿದರು. ಅಂದಿನಿಂದ ಇಂದಿನಿವರೆಗೂ ಗೋವಿಂದರಾಜು ಹಂಸಲೇಖ ಆಗಿಯೇ ಸಂಗೀತ ಪ್ರೇಮಿಗಳ ಮನಸಲ್ಲಿ ನೆಲೆಸಿದ್ದಾರೆ.
1973ರಲ್ಲಿ ತ್ರಿವೇಣಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ
1973 ರಲ್ಲಿ ಉದಯ ಕುಮಾರ್ ಅಭಿನಯದ "ತ್ರಿವೇಣಿ" ಚಿತ್ರಕ್ಕೆ "ನೀನಾ ಭಗವಂತ" ಹಾಡಿನ ಮೂಲಕ ಸಾಹಿತಿಯಾಗಿ ಚಿತ್ರರಂಗವನ್ನು ಪ್ರವೇಶಿಸಿದರು. ಈ ಚಿತ್ರಕ್ಕೆ ಹಾಡನ್ನು ಬರೆಯುವ ಅವಕಾಶವನ್ನು ಒದಗಿಸಿದ ಕೊಟ್ಟ ನಿರ್ದೇಶಕ ಎಂ.ಎನ್. ಪ್ರಸಾದ್ ಅವರು ಚಲನಚಿತ್ರಗಳಿಗೆ ಪರಿಚಯಿಸಿದರು. ಇನ್ನು 1981ರಲ್ಲಿ ಬಿಡುಗಡೆಯಾಗದ ʻರಾಹುಚಂದ್ರʼ ಚೊಚ್ಚಲ ಚಿತ್ರಕ್ಕೆ ಅಧಿಕೃತವಾಗಿ ಸಂಗೀತಗಾರರಾದ್ರು. ಅಲ್ಲದೇ 1985ರಲ್ಲಿ ʻನಾನು ನನ್ನ ಹೆಂಡ್ತಿʼ ಚಿತ್ರಕ್ಕೆ ಸಂಭಾಷಣೆ ಮತ್ತು ಗೀತರಚನೆಕಾರರಾಗಿ ಅವರ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭ ಮಾಡಿದ್ರು. ನಂತರ 1986ರಲ್ಲಿ ರಿಲೀಸ್ ಆದ ಹೆಣ್ಣೇ ನಿನಗೇನು ಬಂಧನ ಸಿನಿಮಾಗೆ ಹಂಸಲೇಖ ಸಂಗೀತ ನೀಡಿದ್ದರು. ಆದರೆ ಅದು ಹಿಟ್ ಆಗಲೇ ಇಲ್ಲ. 1987ರಲ್ಲಿ ತೆರೆಕಂಡ ಪ್ರೇಮಲೋಕ ಸಿನಿಮಾ ಹಂಸಲೇಖ ಅವರ ಸಾಮರ್ಥ್ಯವನ್ನು ಸಿನಿರಂಗಕ್ಕೆ ತೋರಿಸಿಕೊಟ್ಟಿತ್ತು. ನಂತರ ರವಿಚಂದ್ರನ್ ಹಾಗೂ ಹಂಸಲೇಖ ಅವರ ಜೋಡಿ ರಾಜ್ಯಭಾರ ಮಾಡಿತ್ತು. ರಾಮಚಾರಿ, ರಣಧೀರ, ಹಳಿಮೇಷ್ಟ್ರು ಹೀಗೆ ಹಲವಾರು ಸಿನಿಮಾಗಳಲ್ಲಿ ಈ ಜೋಡಿ ರಂಜಿಸಿತ್ತು. ಇಂದಿಗೂ ರವಿಚಂದ್ರನ್ ಹಾಗೂ ಹಂಸಲೇಖ ಅವರ ಜೋಡಿ ಕೊಟ್ಟಿರೋ ಹಾಡುಗಳು ಎವರ್ ಗ್ರೀನ್ ಹಾಡುಗಳಾಗಿ ಉಳಿದುಕೊಂಡಿವೆ... ಇನ್ನು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷಾ ಚಿತ್ರಗಳಿಗೆ ಸಂಗೀತ ಹಾಗೂ ಸಾಹಿತ್ಯ ನೀಡಿದ್ದಾರೆ. ತಮ್ಮ ಸಂಗೀತದಿಂದಾಗಿಯೇ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಇವರು ಕನ್ನಡ ಚಿತ್ರರಂಗದಲ್ಲಿ ನಾದ ಬ್ರಹ್ಮ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ನಾನು ನನ್ನ ಹೆಂಡತಿ, ಪ್ರೇಮಲೋಕ, ಆಕಸ್ಮಿಕ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ, ಹಿನ್ನೆಲೆ ಗಾಯಕರಾಗಿ ಹಾಗೂ ಚಿತ್ರ ಸಾಹಿತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
1990ರಲ್ಲಿ ಹಿನ್ನೆಲೆ ಗಾಯಕಿ ಲತಾರನ್ನು ಕೈ ಹಿಡಿದ ಹಂಸಲೇಖಾ
ಇನ್ನು 1990ರ ದಶಕದಲ್ಲಿ ಹಿನ್ನೆಲೆ ಗಾಯಕಿಯಾಗಿದ್ದ ಲತಾ ಹಂಸಲೇಖಾ ಅವರನ್ನು ಹಂಸಲೇಖಾ ವಿವಾಹವಾದ್ದರು. ಆ ದಂಪತಿಗೆ ಅಲಂಕಾರ್ ಎಂಬ ಮಗ ಮತ್ತು ತೇಜಸ್ವಿನಿ ಹಾಗೂ ನಂದಿನಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ಅಲಂಕಾರ್ ಅವರು ನಟ ಮತ್ತು ಸಂಗೀತಗಾರರಾಗಿ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಅವರ ಬಿಡುಗಡೆಯಾದ ಮತ್ತು ಬಿಡುಗಡೆಯಾಗದ ಕೆಲವು ಚಲನಚಿತ್ರಗಳು ಬಾಕಿ ಇವೆ. ಇನ್ನು ಪುತ್ರಿ ತೇಜಸ್ವಿನಿ ಅವರು ಕೂಡ ಚಲನಚಿತ್ರ ನಿರ್ದೇಶನ, ನಟನೆ ಮತ್ತು ನಿರ್ದೇಶನದ ನಾಟಕಗಳೊಂದಿಗೆ ಸಂಬಂಧ ಹೊಂದಿದ್ದು, ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ರಂಗಭೂಮಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಅವರ ತಂದೆ ಹಂಸಲೇಖ ಅವರ ಸಹಯೋಗದಲ್ಲಿ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇತ್ತ ನಂದಿನಿ ಕೂಡ ತನ್ನ ಹಿನ್ನೆಲೆ ಗಾಯನ ವೃತ್ತಿಜೀವನವನ್ನು 2006ರಲ್ಲಿ ಸಿಕ್ಸರ್ ಚಿತ್ರದ ಮೂಲಕ ಪ್ರಾರಂಭ ಮಾಡಿದ್ದಾರೆ.
ಇನ್ನು ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ಹಿನ್ನೆಲೆ ಗಾಯಕಿ ಹಾಗೂ ನಾದಬ್ರಹ್ಮ ಮಡದಿ ಲತಾ ಹಂಸಲೇಖಾ, ನನ್ನ ಹಂಸಲೇಖ ಮದುವೆ ನಡೆದಿದ್ದೇ ಒಂದು ದೊಡ್ಡ ಕಥೆ. ಪರಿಚಯ ಆಗಿ ಎರಡು ವರ್ಷವೂ ಆಗಿರಲಿಲ್ಲ. ಆದರೆ, ಸುಮಧುರ ಸ್ನೇಹ ನಮ್ಮ ನಡುವೆ ಅಂಕುರಿಸಿತ್ತು. ಅದೊಂದು ದಿನ ನೇರವಾಗಿ ನನ್ನನ್ನು ಅವರು ಕೇಳಿಯೇಬಿಟ್ಟರು... ನಾನು ನಿನ್ನನ್ನ ಮದ್ವೆ ಮಾಡ್ಕೋಬೇಕು ಅಂತಿದ್ದೀನಿ. ಆಗ್ತೀಯಾ?' ಅಂತ. ತಕ್ಷಣಕ್ಕೆ ನನಗೇನು ಹೇಳಬೇಕು ಅಂತ ಅನ್ನಿಸದಿದ್ದರೂ, ಅವರು ಮೊದಲೇ ನನಗೆ ಇಷ್ಟವಾಗಿದ್ದರಿಂದ ನಾನು ಅದಕ್ಕೆ ಆಯ್ತು ಅಂದೆ. ಕೇವಲ ಎರಡು ವರ್ಷದ ಹಿಂದೆ ಹಂಸಲೇಖ ಎನ್ನುವ ವಂಡರ್‌ಫುಲ್ ವ್ಯಕ್ತಿಯೊಡನೆ ಸ್ನೇಹ ಸಂಪಾದಿಸುವ ಅವಕಾಶ ಪಡೆದಿದ್ದ ನನಗೆ, ಆ ಸ್ನೇಹ, ಮುಂದೆ ಪ್ರೇಮವಾಗಿ ಪರಿವರ್ತನೆಗೊಂಡು ನಾನವರನ್ನು ಮದ್ವೆ ಆಗ್ತೀನಿ ಅಂತ ಅವತ್ತಿನ ಮಟ್ಟಿಗೆ ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಅಂತ ಹೇಳುತ್ತಾರೆ..
ಹಂಸಲೇಖಾ ಅವರು ಮ್ಯಾಂಡೋಲಿನ್ ಅನ್ನು ತುಂಬಾ ಚೆನ್ನಾಗಿ ನುಡಿಸುತ್ತಿದ್ದರು. ಎಂಥವರನ್ನೂ ಮೋಡಿ ಮಾಡುವ ಆ ಸಂಗೀತ ನನಗಿಷ್ಟ. ಅವರಲ್ಲಿನ ಕಲೆಗೆ ನಾನು ಮಾರುಹೋಗಿದ್ದೆ. ನನಗರಿವಿಲ್ಲದಂತೆ ಅವರನ್ನು ಇಷ್ಟಪಡುತ್ತಿದ್ದೆ. ಅವರಂದ್ರೆ ಅದೇನೋ ಇಷ್ಟ. ಅವರಿಗೂ ಹಾಗೇ ಅನ್ನಿಸಿರಬೇಕು. ಸರಿ... ಒಂದು ದಿನ ನನ್ನ ಬಳಿಗೆ ಬಂದು ಮದ್ವೆ ಪ್ರಸ್ತಾಪ ಎತ್ತಿದರು. ನಾನೂ ಒಪ್ಪಿದೆ. ಇನ್ನು ನಮ್ಮ ಮನೆಗೆ ಹೆಣ್ಣು ಕೇಳಲು ಬಂದಿದ್ದಾಗ, ʻನಿನಗೇನು ಬರುತ್ತೆ?' ಅಂತ ನಮ್ಮ ಮನೆಯಲ್ಲಿ ಕೇಳಿದ್ದಕ್ಕೆ ಅವರು ʻಚೆನ್ನಾಗಿ ಮ್ಯಾಂಡೋಲಿನ್ ನುಡಿಸಬಲ್ಲೆ' ಎಂದು ಹೇಳಿದರಲ್ಲದೆ, ಬ್ಯಾಗಿನಲ್ಲಿದ್ದ ಮ್ಯಾಂಡೋಲಿನ್ ಹೊರತಗೆದು ನುಡಿಸಿಯೇಬಿಟ್ಟರು. ನನ್ನ ಅಮ್ಮನಿಗೆ ಸಂಗೀತ ಅಂದ್ರೆ ಪಂಚಪ್ರಾಣ. ಅವರ ಸಂಗೀತ ಮೋಡಿಗೆ ಮರುಳಾದ ಅಮ್ಮ, ನನ್ನನ್ನು ಕೊಡಲು ಒಪ್ಪಿಯೇಬಿಟ್ಟರು. ನಮ್ಮಿಬ್ಬರ ಮದ್ವೆ ನಡೆದಿದ್ದು ಧರ್ಮಸ್ಥಳದಲ್ಲಿ. ಅದೊಂದು ಸರಳ ವಿವಾಹ ಅಂತ ಹೇಳಿದ್ದಾರೆ.
ಹಂಸಲೇಖ ಅವರ ವಿಶ್ವರಂಗಭೂಮಿ" ಪರಿಕಲ್ಪನೆ
ಇನ್ನು ಹಂಸಲೇಖ ಅವರ "ವಿಶ್ವರಂಗಭೂಮಿ " ಪರಿಕಲ್ಪನೆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಚನ್ನಪಟ್ಟಣದ ಬಳಿ ನರಸಿಂಹ ಸ್ವಾಮಿ ದೇವರ ಗುಡ್ಡದ ತಪ್ಪಲಲ್ಲಿ ವಸತಿ ಮತ್ತು ವಿದ್ಯಾಲಯ ನಿರ್ಮಾಣ ಸಾಗಿದೆ. ಇನ್ನು ಎರಡು ವರ್ಷದಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ಕಲೆ-ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವ ಕನಸಿದೆ. ಆ ವಿದ್ಯಾರ್ಥಿಗಳು ಸೃಷ್ಟಿಸಲಿರುವ ಬೃಹತ್ ದೇಸಿ ಸೊಗಡಿನ ನೃತ್ಯ ರೂಪಕಗಳು ಅಲ್ಲಿ ಪ್ರದರ್ಶಿಸಲ್ಪಡುತ್ತವೆ. ಮೈಸೂರನ್ನು ನೋಡ ಬಯಸುವ ಪ್ರವಾಸಿಗರಿಗೆ ನಡುವಿನಲ್ಲಿಯೇ ಒಂದು ಸಾಂಸ್ಕೃತಿಕ ಲೋಕದ ದರ್ಶನವನ್ನು ಹಂಸಲೇಖ ಅವರ "ವಿಶ್ವರಂಗಭೂಮಿ" ನೀಡಲಿದೆ. ಇನ್ನು ಶ್ರೀ ಹಂಸಲೇಖ ರವರು ತಮ್ಮ ಪತ್ನಿ ಶ್ರೀಮತಿ ಲತಾ ರವರ ಜೊತೆಗೆ ತಮ್ಮ ನಿವಾಸದಲ್ಲಿಯೇ ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಮಾಡುತ್ತಿದ್ದಾರೆ ಹಾಗೂ ಪ್ರಸ್ತುತ ಜಾನಪದ ಸಾಹಿತ್ಯದಲ್ಲಿ ಸಂಪೂರ್ಣ ತೊಡಿಗಿರುವುದು ನಿಜಕ್ಕೂ ಸಂತಸದ ವಿಷಯ.
ಸದ್ಯ ಹಂಸಲೇಖಾ ಅವರು ಜೀ ಕನ್ನಡ ವಾಹಿನಿಯ ಸರಿಗಮಪ ಹಾಡಿನ ಸ್ಪರ್ಧೆಯಲ್ಲಿ ಮಹಾಗುರುಗಳಾಗಿ ಸತ್ಯಪೀಠದಲ್ಲಿ ಕುಳಿತು ಸಾಹಿತ್ಯ, ಸಂಗೀತ, ಹೋರಾಟ ಹೀಗೆ ಎಲ್ಲಾ ಬಗೆಯ ಜ್ಞಾನವನ್ನು ಸ್ಪರ್ಧಿಗಳಿಗಷ್ಟೆಯಲ್ಲದೇ ನೋಡುಗರಿಗೂ ತುಂಬುತ್ತಿದ್ದಾರೆ.
ಹಂಸಲೇಖ ಅವ್ರು ನಾದಬ್ರಹ್ಮ ಎಂದೇ ಖ್ಯಾತರಾದವರು. ಚಿತ್ರರಂಗದ ಒಳಗೆ ವಿವಾದಗಳಿಲ್ಲದ ವ್ಯಕ್ತಿಯೇನಲ್ಲ. ಆದರೆ, ಚಿತ್ರರಂಗದ ಹೊರಗೆ ಅವರಿಗೆ ಇದ್ದ ಇಮೇಜ್ ಬೇರೆ. ಇದೇ ಮೊದಲ ಬಾರಿಗೆ ಹಂಸಲೇಖ ಒಂದು ವಿವಾದಕ್ಕೆ ಸಿಲುಕಿದ್ದಾರೆ. ಅದೂ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ್ದು, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ, ʻಪೆಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು. ಅದರಿಂದ ಯಾರಿಗೂ ಲಾಭವಿಲ್ಲ. ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಮೊಟ್ಟೆ ಕೊಟ್ಟರೆ ತಿಂತಾರಾ?, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ?, ಲಿವರ್ ಫ್ರೈ ಮಾಡಿಕೊಟ್ಟರೆ ತಿಂತಿದ್ರಾ..?, ಮೇಲ್ಜಾತಿ ಜನ ಎಲ್ಲಿಗೇ ಹೋದರೂ ಮೇಲ್ಜಾತಿಯವರಂತೆಯೇ ವರ್ತಿಸುತ್ತಾರೆ ಅಂತ ಹೇಳಿದ್ರು. ಬಲಿತರು ದಲಿತರ ಮನೆಗೆ ಹೋಗೋದಲ್ಲ. ದಲಿತರನ್ನು ಬಲಿತರು ಮನೆಗೆ ಕರೆಸಿಕೊಂಡು ಅವರಿಗೆ ಊಟ ಹಾಕಿ, ಅವರ ತಟ್ಟೆ ತೊಳೆಯುವುರದಲ್ಲಿ ಸಮಾನತೆ ಇದೆ ಎಂದಿದ್ದರು ಹಂಸಲೇಖ. ಇನ್ನು ಇದಲ್ಲದೇ ಬಿಳಿಗಿರಿ ರಂಗಯ್ಯನ ವಿಷಯವನ್ನೂ ಹಂಸಲೇಖ ಹೀಗೇ ತಮ್ಮದೇ ಆದ ರೀತಿಯಲ್ಲಿ ವಿಡಂಬನೆ ಮಾಡಿದ್ದರು. ಬಿಳಿಗಿರಿ ರಂಗಯ್ಯ ಸೋಲಿಗರ ಹೆಣ್ಣು ಮಗಳನ್ನು ಪ್ರೀತಿಸಿ, ಆಕೆಯ ಮನೆಗೇ ಹೋಗಿ ಸಂಸಾರ ಮಾಡುತ್ತಾನೆ. ಮಾರನೇ ದಿನ ಕಲ್ಲಾಗುತ್ತಾನೆ. ಇದು ಕಥೆ. ಅದೊಂದು ಬೂಟಾಟಿಕೆ, ನಾಟಕ ಎನ್ನುವುದು ಹಂಸಲೇಖ ವಾದ. ಹಂಸಲೇಖ ಪ್ರಕಾರ ಬಿಳಿಗಿರಿ ರಂಗಯ್ಯ ಆ ಸೋಲಿಗರ ಹೆಣ್ಣನ್ನು ತನ್ನ ಮನೆಗೆ ಕರೆತಂದು ಸಂಸಾರ ಮಾಡಬೇಕಿತ್ತು ಅಂತ ವಾದವಾಗಿತ್ತು. ಈ ಹೇಳಿಕೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಂಸಲೇಖ ವಿರುದ್ಧ ಜನರೇ ತಿರುಗಿಬಿದ್ದರು. ಅದರಲ್ಲೂ ಪೇಜಾವರ ಶ್ರೀ ಅಭಿಮಾನಿಗಳು ಹಂಸಲೇಖ ಅವರನ್ನು ತೀವ್ರವಾಗಿ ಜಾಡಿಸಿದರು. ಬಿಳಿಗಿರಿ ರಂಗಯ್ಯನ ವಿಷಯ, ಅದೇ ಕಾರ್ಯಕ್ರಮದಲ್ಲಿ ಭಗವದ್ಗೀತೆ ಬಗ್ಗೆ ಮಾತನಾಡಿದ್ದು.. ಎಲ್ಲವೂ ಹಂಸಲೇಖ ವಿರುದ್ಧ ಜನರು ತಿರುಗಿಬೀಳಲು ಕಾರಣವಾಯ್ತು.
ಮೊದಲಿಗೆ ಕ್ಷಮೆ ಇರಲಿ, ಎರಡನೆಯದಾಗಿಯೂ ಕ್ಷಮೆ ಇರಲಿ. ಎಲ್ಲ ಮಾತುಗಳೂ ವೇದಿಕೆಗೆ ಅಲ್ಲ. ಅಸ್ಪೃಶ್ಯತೆ ತೊಡೆದು ಹಾಕಲು ಪೇಜಾವರ ಶ್ರೀಗಳು ಸೇರಿದಂತೆ ಎಲ್ಲರ ಪ್ರಯತ್ನ, ಸಂಧಾನಗಳ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಆಡಿದ ಕೆಲ ಮಾತುಗಳು ನನ್ನ ಹೆಂಡತಿಗೂ ಇಷ್ಟವಾಗಲಿಲ್ಲ. ಆಕೆಯ ಕ್ಷಮೆಯನ್ನೂ ಕೇಳಿದ್ದೇನೆ ಎಂದಿದ್ದಾರೆ ಹಂಸಲೇಖ. ಆದರೆ.. ಕ್ಷಮೆ ಕೇಳುತ್ತಲೇ ಎಲ್ಲ ಮಾತುಗಳೂ ವೇದಿಕೆಗೆ ಅಲ್ಲ ಎನ್ನುವ ಮೂಲಕ ಎಂದಿರುವ ಹಂಸಲೇಖ ಅವರ ಮಾತನ್ನು ಹಲವರು ಒಪ್ಪಿಲ್ಲ. ಕ್ಷಮೆ ಕೇಳುತ್ತಿರುವುದು ಕೇವಲ ನಾಟಕ. ಹಂಸಲೇಖ ಈ ರೀತಿ ಮಾತನಾಡಬಾರದಿತ್ತು ಎಂದಿದ್ದಾರೆ ಹಲವರು. ಪರ ವಿರೋಧ ಚರ್ಚೆಗಳ ಮಧ್ಯೆ ಹಂಸಲೇಖಾ ವಿರುದ್ಧ ಪ್ರತಿಭಟನೆ ಕೂಗುಗಳೂ ಕೇಳಿ ಬಂತು..
ಎಸ್ ಹಂಸಲೇಖ ಅವರು ಕನ್ನಡ ಚಿತ್ರ ರಂಗಕ್ಕೆ ನೀಡಿದ ಎವರ್ ಗ್ರೀನ್ ಹಾಡುಗಳು ಹಾಗೂ ಅವ್ರು ಕೊಟ್ಟ ಕೊಡುಗೆಗಳು ಕರುನಾಡಿನ ಸಂಗೀತ ಪ್ರಿಯರು ಎಂದಿಗೂ ಮರೆಯಲಾರರು. ಅವ್ರ ಹಾಡು, ಸಿನಿ ರಂಗದ ಸಂಗೀತ ಪ್ರೇಮದ ಬಗ್ಗೆ ಅವ್ರ ಅಪಾರ ಜ್ಞಾನ ಭಂಡಾರದ ಅನುಭವ ಮಾತುಗಳು, ಕರುನಾಡಿನ ಜನತೆಗೆ ಧಾರೆ ಎರೆಯಲಿ ಎನ್ನುವುದೇ ನಮ್ಮ ಆಶಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.