ಪೂರ್ಣ ಆಯುಷ್ಯ ಶ್ರೇಷ್ಠವಾಗಿ ಬದುಕಿ ನಿರ್ಗಮಿಸಿದ ಮನುಜ ಲೋಕನಾಥ್: ಜಗ್ಗೇಶ್
ಲೋಕನಾಥ್ ಅವರಲ್ಲಿ ನಾನು ನನ್ನ ತಂದೆ, ತಾತ, ಬಂಧುವನ್ನು ಕಾಣುತ್ತಿದ್ದೆ ಎಂದು ಚಿತ್ರನಟ ಜಗ್ಗೇಶ್ ಹೇಳಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ಅವರ ನಿಧನಕ್ಕೆ ನವರಸನಾಯಕ ಜಗ್ಗೇಶ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, "ಲೋಕನಾಥ್ ಅವರನ್ನು ಕಳೆದ 35 ವರ್ಷಗಳಿಂದ ನಾನು ಬಲ್ಲೆ. ಆವರೊಬ್ಬ ಶಿಸ್ತಿನ ಕಲಾಬಂಧು. ಅಂಬರೀಶ್ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ನನ್ನ ಬಳಿ ಕೂತು ಆತ್ಮೀಯವಾಗಿ ಮಾತನಾಡಿಸಿದ್ದರು. ಅವರಲ್ಲಿ ನಾನು ನನ್ನ ತಂದೆ, ತಾತ, ಬಂಧುವನ್ನು ಕಾಣುತ್ತಿದ್ದೆ. ಅವರೊಬ್ಬ ಪೂರ್ಣ ಆಯುಷ್ಯ ಶ್ರೇಷ್ಠವಾಗಿ ಬದುಕಿ ನಿರ್ಗಮಿಸಿದ ಶ್ರೇಷ್ಠ ಮನುಜ" ಎಂದಿದ್ದಾರೆ.
ಕನ್ನಡ ಚಿತ್ರಂಗದಲ್ಲಿ ಅಂಕಲ್ ಎಂದೇ ಗುರುತಿಸಿಕೊಂಡಿದ್ದ ಲೋಕನಾಥ್ ಅವರು ಭಾನುವಾರ ತಡರಾತ್ರಿ 12.15 ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಇವರು ಓರ್ವ ಗಂಡು ಮತ್ತು ನಾಲ್ಕು ಜನ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇವರ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 12ರಿಂದ - 2.30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಸಂಜೆ 4 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.