ನನ್ನ ಹೇಳಿಕೆಯನ್ನು ಮಾಧ್ಯಮದವರು ತಿರುಚಿದ್ದಾರೆ: ಪ್ರಕಾಶ್ ರೈ
ಬೆಂಗಳೂರು: ನಟರು ರಾಜಕೀಯ ನೇತಾರರಾಗುತ್ತಿರುವುದು ದೇಶದ ದುರಂತ ಎಂದು ನಿನ್ನೆಯಷ್ಟೇ ಮಾಧ್ಯಮಗಳು ಸುದ್ದಿ ಮಾಡಿದ್ದವು. ಇದನ್ನು ಖಂಡಿಸಿ, ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಬೆಂಗಳೂರು ಪ್ರೆಸ್ ಕ್ಲಬ್ ಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ನಟರು ತಮ್ಮ ಖ್ಯಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಪ್ರವೇಶ ಮಾಡುತ್ತಿರುವುದು ದುರಂತ ಎಂದು ನಾನು ಹೇಳಿದ್ದೆ. ಅಲ್ಲದೇ ನಟರು ಒಂದು ವೇಳೆ ರಾಜಕೀಯಕ್ಕೆ ಬರಬೇಕಾದರೆ ಮೊದಲು ಅವರು ದೇಶವು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಸ್ಪಷ್ಟವಾದ ಗುರಿ ಮತ್ತು ಉದ್ದೇಶವನ್ನು ಹೊಂದಿರಬೇಕು. ಆ ಮೂಲಕ ಜನರ ವಿಶ್ವಾಸವನ್ನು ಗಳಿಸುವಂತಾಗಬೇಕು. ಏಕೆಂದರೆ ನಾವು ಮತ ಚಲಿಸುವಾಗ ಕೇವಲ ಅವರ ಅಭಿಮಾನಿಗಳಾಗಿ ಮತ ಚಲಾಯಿಸುವ ಬದಲಾಗಿ ಜವಾಬ್ದಾರಿಯುತ ನಾಗರಿಕರಾಗಿ ಮತ ಚಲಾಯಿಸುತ್ತೇವೆ ಎಂದು ತಿಳಿಸಿದ್ದೆ. ಆದರೆ, ಮಾಧ್ಯಮಗಳು ಈ ಹೇಳಿಕೆಯನ್ನು ತಿರಿಚಿ ಹೇಳಿವೆ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ ತಮ್ಮ ಕಟು ನುಡಿಗಳಲ್ಲಿ ಪತ್ರ ಬರೆಯುತ್ತಾ "ನಮ್ಮ ನಡುವೆ ನಂಬಿಕೆಯಾದರು ಎಲ್ಲಿದೆ... ಇಂತಹ ತಿರುಚುವ ಸಂಗತಿಗಳು ಎಲ್ಲಾ ಪತ್ರಕರ್ತರ ಹಾಜರಿಯಲ್ಲಿ ಅದು ಪತ್ರಕರ್ತರ ಕ್ಲಬ್ ನಲ್ಲಿ ನಡೆದಿರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ. ಇಂತಹ ಕಹಿ ಸಂಗತಿಯನ್ನು ಸರಿಪಡಿಸಲು ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತೀರಿ? ಎಂದು ಪ್ರಶ್ನಿಸಿರುವ ರೈ, ಅದಕ್ಕೆ ಸಮರ್ಪಕ ಉತ್ತರ ಪಡೆಯುತ್ತೇನೆಂಬ ವಿಶ್ವಾಸವಿದೆ ಎಂದು ಪ್ರೆಸ್ ಕ್ಲಬ್ ಗೆ ಬರೆದಿರುವ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಕಾಶ ರೈ ಭಾನುವಾರ ಚಿತ್ರನಟರು ರಾಜಕೀಯಕ್ಕೆ ಬರುವ ವಿಷಯವಾಗಿ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆ ರಾಜ್ಯ ಮತ್ತು ರಾಷ್ಟ್ರೀಯ ಸುದ್ದಿವಾಹಿಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯನ್ನು ಮಾಡಿತ್ತು.