#MeToo: ಅರ್ಜುನ್ ಸರ್ಜಾ ಆಪ್ತನ ವಿರುದ್ಧ ದೂರು ದಾಖಲಿಸಿದ ಶ್ರುತಿ ಹರಿಹರನ್

ಸರ್ಜಾ ಆಪ್ತ ಸಂಬರಗಿ ವಿರುದ್ಧ ದೂರು ದಾಖಲು
ಬೆಂಗಳೂರು: #MeToo ಅಭಿಯಾನದಡಿ ಆಕ್ಷನ್ ಕಿಂಗ್, ನಟ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಇದೀಗ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ತಡರಾತ್ರಿಯಲ್ಲಿ ತೆರಳಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಅವರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ಶ್ರುತಿ ಹರಿಹರನ್, ಜೀವ ಬೆದರಿಕೆ ಹಾಗೂ ಖಾಸಗಿತನಕ್ಕೆ ಧಕ್ಕೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಪ್ರಶಾಂತ್ ಸಂಬರ್ಗಿ, ನಾನು ಹಿಂದೂ ಧರ್ಮದ ವಿರೋಧಿ ಎಂದು ಹೇಳಿ ಒಂದು ಸಮುದಾಯವನ್ನು ನನ್ನ ವಿರುದ್ಧ ಎತ್ತಿ ಕಟ್ಟಿದ್ದಾರೆ. ಜೊತೆಗೆ ನನ್ನ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ.'' ಎಂದು ದೂರಿನಲ್ಲಿ ಶ್ರುತಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟ ಅಂಬರೀಶ್ ಅವರ ನೇತೃತ್ವದಲ್ಲಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರನ್ನು ಕರೆಸಿ ಮಾತುಕತೆ ಮಾಡಲಾಯಿತು. ಇಬ್ಬರೂ ಸಂಧಾನಕ್ಕೆ ಒಪ್ಪದ ಕಾರಣ ನಿನ್ನೆಯ ಸಭೆ ವಿಫಲವಾಗಿತ್ತು.