ಬೆಂಗಳೂರು: #MeToo ಅಭಿಯಾನದಡಿ ಬಹುಭಾಷಾ ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಲೂಸಿಯಾ ಖ್ಯಾತಿಯ ನಟಿ ಶೃತಿ ಹರಿಹರನ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟಿ ಶೃತಿ ಹರಿಹರನ್ ವಿರುದ್ಧ ಅರ್ಜುನ್‍ ಸರ್ಜಾ ಅವರ ಮಾವ ಹಾಗೂ ಹಿರಿಯ ನಟ ರಾಜೇಶ್ ಅವರು ಇಂದು ದೂರು ನೀಡಿದ್ದು, ಶೃತಿಹರಿಹರನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


ಅರ್ಜುನ್‍ಸರ್ಜಾ ತೇಜೋವಧೆ  ವ್ಯವಸ್ಥಿತ ಹುನ್ನಾರ:
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಿತ್ರರಂಗದಲ್ಲಿ ಮಡಿವಂತಿಕೆ, ಮೈಲಿಗೆ ಇಲ್ಲ. ತಮ್ಮ ಅಳಿಯನ ವಿರುದ್ಧ ಷಡ್ಯಂತ್ರ ಮಾಡಿ ಆರೋಪಿಸಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದಿರುವ ಘಟನೆಯನ್ನು ಈಗ ಪ್ರಸ್ತಾಪಿಸಿ ಶೃತಿಹರಿಹರನ್ ದೂರು ನೀಡಿದ್ದಾರೆ. ಎರಡು ವರ್ಷ ಸುಮ್ಮನಿದ್ದು ಈಗ ಏಕಾಏಕಿ ದೂರು ನೀಡಲು ಹೇಗೆ ಸಾಧ್ಯ ? ಇಷ್ಟು ದಿನ ಇಲ್ಲದ ಧೈರ್ಯ ಈಗ ದಿಢೀರ್ ಹೇಗೆ ಬರಲು ಸಾಧ್ಯ? ಅದರ ಹಿಂದೆ ಯಾರು ಇದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅರ್ಜುನ್‍ಸರ್ಜಾ ಅವರ ತೇಜೋವಧೆ ಮಾಡಲು ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ಆರೋಪಿಸಿರುವ ನಟ ರಾಜೇಶ್ ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಅಲ್ಲದೆ ಅರ್ಜುನ್ ಸರ್ಜಾ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡಿರುವ ನಟಿ ಶೃತಿ ಹರಿಹರನ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಆಗ್ರಹಿಸಿರುವುದಲ್ಲದೆ, ಈ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿಯವರು ಕೈಗೊಳ್ಳುವ ತೀರ್ಮಾನಕ್ಕೆ ತಾವು ಬದ್ಧ ಎಂದು ಹೇಳಿದರು.


#MeToo ಅಭಿಯಾನದಡಿ 'ವಿಸ್ಮಯ' ಚಿತ್ರದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದರು ಎಂದು ಆರೋಪಿಸಿರುವ ಶೃತಿ ಹರಿಹರನ್, ಅರ್ಜುನ್ ಸರ್ಜಾ ತಮ್ಮನ್ನು ಊಟಕ್ಕೆ ಹೋಗೋಣ ಬಾ.. ರೆಸಾರ್ಟ್ ಗೆ ಹೋಗೋಣ ಬಾ.. ಎನ್ನುತ್ತಿದ್ದರು ಎಂದು ಆರೋಪ ಮಾಡಿದ್ದರು. ತಾವು ಹಲವಾರು ನಟರ ಜೊತೆ ನಟಿಸಿದ್ದಾಗ ತಮಗೆ ಯಾವುದೇ ರೀತಿ ಸಮಸ್ಯೆಯಾಗಿರಲಿಲ್ಲ, ಆದರೆ ವಿಸ್ಮಯ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ತಮ್ಮ ಜೊತೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದರು ಎಂದು ಶೃತಿ ಹೇಳಿಕೆ ನೀಡಿದ್ದರು. ಬಳಿಕ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಸ್ಯಾಂಡಲ್ ವುಡ್ ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪರ- ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ.


ಚಿತ್ರೋದ್ಯಮದ ಅನೇಕ ನಟ, ನಟಿಯರು, ನಿರ್ಮಾಪಕ ಹಾಗೂ ನಿರ್ದೇಶಕರು ಅರ್ಜುನ್ ಸರ್ಜಾ  ಬೆಂಬಲಿಸಿದ್ದರೆ, ಮತ್ತೆ ಕೆಲವರು ನಟಿ ಶೃತಿ ಹರಿಹರನ್ ಪರ ನಿಂತಿದ್ದು, ವಿವಾದ ಇದೀಗ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ. ಇದೀಗ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಅವರ ನೇತೃತ್ವದಲ್ಲಿ ತುರ್ತು ಸಭೆ ಕಡೆಯಲಾಗಿದ್ದು ಎಲ್ಲರ ಚಿತ್ತ ಚಲನಚಿತ್ರ ವಾಣಿಜ್ಯ ಮಂಡಳಿಯತ್ತ ನೆಟ್ಟಿದೆ.