Yala Kunni: ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಮೊಟ್ಟಮೊದಲ ಬಾರಿಗೆ ದ್ವಿಪಾತ್ರದಲ್ಲಿ  ನಟಿಸುತ್ತಿರುವ "ಯಲಾ ಕುನ್ನಿ" ಚಿತ್ರದ ಮುಹೂರ್ತ ಸಮಾರಂಭ ವಿಜಯನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರಕ್ಕೆ  ಕನ್ನಡ ಚಿತ್ರರಂಗದ ದಂತಕಥೆ ವಜ್ರಮುನಿ ರವರ ಕುಟುಂಬದ ಎಲ್ಲ ಸದಸ್ಯರು ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು. ವಜ್ರಮುನಿರವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ವಜ್ರಮುನಿ ಕ್ಯಾಮರಾ ಚಾಲನೆ ಮಾಡಿದರೆ, ಮೊದಲ ಸನ್ನಿವೇಶಕ್ಕೆ  ವಜ್ರಮುನಿ ಅವರ ಹಿರಿಯ ಪುತ್ರ ವಿಶ್ವನಾಥ್ ಆರಂಭಫಲಕ ತೋರಿದರು, ವಜ್ರಮುನಿ ಯವರ ಕಿರಿಯ ಪುತ್ರ ಜಗದೀಶ್ ವಜ್ರಮುನಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು. 


COMMERCIAL BREAK
SCROLL TO CONTINUE READING

"ಯಲಾಕುನ್ನಿ" ಖ್ಯಾತ ನಟ ವಜ್ರಮುನಿ ಅವರ ಚಿತ್ರಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಪದ. ಈಗ ಆ ಪದವೇ ಚಿತ್ರದ ಶೀರ್ಷಿಕೆಯಾಗಿದೆ. "ಮೇರಾ ನಾಮ್ ವಜ್ರಮುನಿ..!" ಎಂಬ ಅಡಿಬರಹ ಕೂಡ ಇದೆ. ನಾನು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನಿರ್ದೇಶಕ ಪ್ರದೀಪ್ ಬಹಳ ಚೆನ್ನಾಗಿ ಕಥೆ , ಚಿತ್ರಕಥೆ , ಸಂಭಾಷಣೆ ಬರೆದಿದ್ದಾರೆ. ಚಿತ್ರದ ಮುಕ್ಕಾಲು ಭಾಗ 1981 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಗಂಜಾಂ ಬಳಿ ಪುರಾತನ ದೇವಾಲಯವಿದ್ದು, ಆ ದೇವಾಲಯದಲ್ಲೇ ಹೆಚ್ಚಿನ ಚಿತ್ರೀಕರಣವಾಗಲಿದೆ. ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗುವುದು ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಾಯಕ ಕೋಮಲ್ ಕುಮಾರ್ ತಿಳಿಸಿದರು.


ಇದನ್ನೂ ಓದಿ : ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ನಿ ಲಿಯೋನ್-ಉರ್ಫಿ ಭೇಟಿ, ನೆಟ್ಟಿಗರು ಅಂದಿದ್ದೇನು ಗೊತ್ತಾ?


ನಾನು ಕನ್ನಡದ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿದ್ದೀನಿ . ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈ ಹಿಂದೆ "ಸಡಗರ" ಚಿತ್ರ ನಿರ್ಮಿಸಿದ್ದ ಮಹೇಶ್ ಗೌಡ್ರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  ಮತ್ತೊಂದು ವಿಶೇಷವೆಂದರೆ  ವಜ್ರಮುನಿ ಯವರ ಮೊಮ್ಮಗ ಆಕರ್ಶ್ ಈ ಚಿತ್ರದ ಮೂಲಕ  ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೊಸ ಪ್ರತಿಭೆ ನಿಸರ್ಗ ಈ ಚಿತ್ರದ ನಾಯಕಿ.‌ ಯತಿರಾಜ್ ಜಗ್ಗೇಶ್, ಫ್ರೆಂಚ್ ಬಿರಿಯಾನಿ ಮಹಾಂತೇಶ್ , ಜಯಸಿಂಹ ಮುಸುರಿ, ಅರವಿಂದ್ ರಾವ್, ಮಂಜು ಪಾವಗಡ, ರಾಜು ತಾಳಿಕೋಟೆ, ಶಿವರಾಜ್, ಬಿರಾದರ್, ವೆಂಕಟೇಶ್ ಪ್ರಸಾದ್ ,ಉಮೇಶ್ ಸಕ್ಕರೆನಾಡು, ಅನಿಲ್ ಯಾದವ್ ಇನ್ನು ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಧರ್ಮವಿಶ್ ಸಂಗೀತ ‌ನಿರ್ದೇಶನ ಹಾಗೂ ಉದಯ್ ಲೀಲಾ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ , ವಿನೋದ್ ರವರ ಸಾಹಸ  ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್  ವಜ್ರಮುನಿಯಾದರೆ, ಅವರ ಬಲಗೈ ಬಂಟನಾಗಿ ಜಯಸಿಂಹ ಮುಸುರಿ "ಕನೆಕ್ಷನ್ ಕಾಳಪ್ಪ" ನಾಗಿ  ಕಾಣಿಸಿ ಕೊಳ್ಳಲಿದ್ದಾರೆ. ಚಿತ್ರದ ಹಿನ್ನಲೆ  ಗೋವಿನ ಹಾಡಿನಲ್ಲಿ ಬರುವ ವ್ಯಾಘ್ರ ಹುಲಿ ಅರ್ಭುತ ಮತ್ತು ಸತ್ಯವೇ ಭಗವಂತನೆಂದ ಪುಣ್ಯಕೋಟಿಯ ಕಥೆಯಿಂದ ಪ್ರೇರಿತವಾಗಿದೆ.  ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರದೀಪ್ ತಿಳಿಸಿದರು. 


ಇದನ್ನೂ ಓದಿ :  ಫ್ಯಾನ್ಸ್‌ ಬಿಗ್‌ ಸರ್ಪ್ರೈಸ್‌ ಕೊಟ್ಟ ಮಹೇಶ್‌ ಬಾಬು..! SSMB28 ಪೋಸ್ಟರ್‌ ರಿಲೀಸ್‌..


ಇದು ನನ್ನ ಎರಡನೇ ನಿರ್ಮಾಣದ ಚಿತ್ರ . ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಹೇಶ್ ಗೌಡ್ರು. ನಾಯಕಿ ನಿಸರ್ಗ ಹಾಗೂ ಚಿತ್ರದಲ್ಲಿ ನಟಿಸುತ್ತಿರುವ ಯತಿರಾಜ್, ಮಾಹಂತೇಶ್, ಆಕರ್ಶ್,‌ ಅರವಿಂದ್ ರಾವ್, ಮಂಜು ಪಾವಗಡ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಉದಯ್ ಲೀಲಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ನನ್ನ ಮೊಮ್ಮಗ ಆಕರ್ಶ್ ಈ ಚಿತ್ರದಲ್ಲಿ ಕೋಮಲ್ ಅವರ ಮಗನ   ಪಾತ್ರದಲ್ಲಿ ಅಭಿನಯಿಸುತ್ತಿದ್ದಾನೆ. ಅವನಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಶ್ರೀಮತಿ ಲಕ್ಷ್ಮೀ ವಜ್ರಮುನಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.