ಫಲಿತಾಂಶಕ್ಕಿಂತ ನಮ್ಮ ಮಕ್ಕಳೇ ನಮ್ಮ ಆಸ್ತಿ; ಪೋಷಕರಿಗೆ ನವರಸನಾಯಕ ಜಗ್ಗೇಶ್ ಕಿವಿಮಾತು!
ಇಂದು ದ್ವಿತೀಯ ಪಿಯುಸಿ ಪ್ರಕಟವಾಗಿದ್ದು, ಈ ಬಾರಿ ಕೂಡ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು, ವಾಡಿಕೆಯಂತೆ ಈ ಬಾರಿ ಕೂಡ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಅದೊಂದು ಕಾಲವಿತ್ತು ಮಕ್ಕಳು 10ನೇ ತರಗತಿಯಲ್ಲಿ ಅಥವಾ ಪಿಯುಸಿಯಲ್ಲಿ ತೇರ್ಗಡೆಯಾದರೆ ಅದೇ ಹೆಗ್ಗಳಿಕೆ. ಆದರೆ ಇದು ಸ್ಪರ್ಧಾತ್ಮಕ ಯುಗ. ಮಕ್ಕಳು ಶೇ.95 ಕ್ಕಿಂತ ಹೆಚ್ಚು ಅಂಕ ಗಳಿಸಿದರೂ ಇನ್ನೂ ಶೇ.5 ಅಂಕ ಕಡಿಮೆ ಆಯಿತು ಎಂದು ಹೇಳುವವರಿದ್ದಾರೆ. ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆ ಹೊರಗಿನವರಿಗಿಂತ ಮನೆಯವರೇ ಅವರನ್ನು ಹಂಗಿಸುತ್ತಾರೆ. ಪರೀಕ್ಷೆಯಲ್ಲಿ ನಿನಗೆ ಎಷ್ಟು ಮಾರ್ಕ್ಸ್ ಬಂತು. ಅಯ್ಯೋ ಬರೀ ಫಸ್ಟ್ ಕ್ಲಾಸಾ... ಎನ್ನುತ್ತಾ ಗೊತ್ತೋ ಗೊತ್ತಿಲ್ಲದೆಯೋ ಮಕ್ಕಳನ್ನು ಮಾನಸಿಕವಾಗಿ ಒತ್ತಡಕ್ಕೆ ತಳ್ಳುತ್ತೇವೆ.
ಕೆಲವೊಮ್ಮ ಮಕ್ಕಳಿಗೆ ತಾವು ಕಡಿಮೆ ಅಂಕ ಗಳಿಸಿದ್ದೇವೆ ಎಂದೆನಿಸಿ ಬೇರೆಯವರಿಗೆ ಮುಖ ತೋರಿಸಲು ಅಂಜಿ ತಮ್ಮ ಕೋಣೆಯಿಂದ ಹೊರಬರದ ಮಕ್ಕಳೂ ಇದ್ದಾರೆ. ಇಂತಹವರಿಗೆಲ್ಲ ನವರಸನಾಯಕ ಜಗ್ಗೇಶ್ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ....
ಆತ್ಮೀಯ ಪೋಷಕ ಬಂಧುಗಳೇ ಅಕಸ್ಮಾತ್ ಮಕ್ಕಳ ಅಂಕ ಅಥವಾ ಅವರ ಫಲಿತಾಂಶ ಏರುಪೇರಾದರೆ ಮಕ್ಕಳನ್ನು ಹಂಗಿಸಬೇಡಿ. ಬದಲಿಗೆ ಮರಳಿಯತ್ನವ ಮಾಡಿ ಎಂದು ಹುರಿದುಂಬಿಸಿ! ಫಲಿತಾಂಶಕ್ಕಿಂತ ನಮ್ಮ ಮಕ್ಕಳೇ ನಮ್ಮ ಆಸ್ತಿ! ಎಂದು ಪೋಷಕರಿಗೆ ಕಿವಿಮಾತನ್ನು ಹೇಳುತ್ತಾ... ಫಲಿತಾಂಶಕ್ಕಾಗಿ ಮಕ್ಕಳಿಗೆ ಶುಭಹಾರೈಸಿದ್ದಾರೆ.