Irrfan Khan ನಿಧನ ಭಾರತೀಯ ರಂಗಭೂಮಿ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಥ ಎಂದ PM Modi
ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ನಿಧನದ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಧಾನಿ, ಇರ್ಫಾನ್ ಖಾನ್ ಅವರ ಅಕಾಲಿಕ ಸಾವು ಭಾರತೀಯ ಚಿತ್ರರಂಗ ಹಾಗೂ ರಂಗಭೂಮಿಗೆ ತುಂಬಲಾರದ ನಷ್ಟ. ವಿಭಿನ್ನ ಮಾಧ್ಯಮಗಳಲ್ಲಿ ಅವರು ನಿರ್ವಹಿಸಿರುವ ಬಹುಮುಖಿ ಪ್ರದರ್ಶನಗಳ ಮೂಲಕ ಅವರನ್ನು ಸ್ಮರಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.
ನವದೆಹಲಿ :ಬಾಲಿವುಡ್ ಖ್ಯಾತ ಹಿರಿಯ ನಟ ಇರ್ಫಾನ್ ಖಾನ್ ಅವರ ನಿಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇರ್ಫಾನ್ ಖಾನ್ ಅವರ ಸಾವು ಸಿನಿಮಾ ಮತ್ತು ರಂಗಭೂಮಿ ಜಗತ್ತಿಗೆ ತುಂಬಲಾರದ ನಷ್ಟ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇರ್ಫಾನ್ ಖಾನ್ ಅವರ ನಿಧನಕ್ಕೆ ಇಂದು ಇಡೀ ದೇಶ ಕಂಬನಿ ಮಿಡಿಯುತ್ತಿದೆ. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಇರ್ಫಾನ್ ಅವರನ್ನು ನಿನ್ನೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
ತಮ್ಮ ಟ್ವೀಟ್ ನಲ್ಲಿ ಇರ್ಫಾನ್ ಸಾವಿಗೆ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, "ಇರ್ಫಾನ್ ಖಾನ್ ಅವರ ನಿಧನದಿಂದ ಭಾರತೀಯ ಸಿನಿಮಾ ಮತ್ತು ರಂಗಭೂಮಿ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ವಿವಿಧ ಮಾಧ್ಯಮಗಳಲ್ಲಿ ಅವರು ನಿರ್ವಹಿಸಿರುವ ಬಹುಮುಖಿ ಪ್ರದರ್ಶನಕ್ಕಾಗಿ ಅವರನ್ನು ಸ್ಮರಿಸಲಾಗುವುದು. ಈ ದುಃಖದ ಸಂದರ್ಭದಲ್ಲಿ ನಾವೂ ಕೂಡ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗೆ ಇದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದಿದ್ದಾರೆ.
ಅತ್ತ ಇನ್ನೊಂದೆಡೆ ಪ್ರಧಾನಿ ಮೊದಿಗೋ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಇರ್ಫಾನ್ ಅವರ ನಿಧನಕ್ಕೆ ಪ್ರತಿಕ್ರಿಯೆ ನೀಡಿದ್ದು, " ಇರ್ಫಾನ್ ಖಾನ್ ಅವರ ನಿಧನ ತುಂಬಾ ನೋವು ತಂದಿದೆ. ಅವರು ಓರ್ವ ಬಹುಮುಖಿ ಪ್ರತಿಭೆಯ ಕಲಾವಿದರಾಗಿದ್ದರು. ಅವರಲ್ಲಿದ್ದ ಕಲೆ ಜಾಗತಿಕ ಖ್ಯಾತಿ ಮತ್ತು ಮನ್ನಣೆಯನ್ನು ಗಳಿಸಿದೆ. ಅವರು ನಮ್ಮ ಚಿತ್ರೋದ್ಯೋಮದ ಆಸ್ತಿಯಾಗಿದ್ದರು. ರಾಷ್ಟ್ರ ಓರ್ವ ಅದ್ಭುತ ನಟ ಹಾಗೂ ದಯೆಯಿಂದ ಕೂಡಿದ ಆತ್ಮವನ್ನು ಕಳೆದುಕೊಂಡಿದೆ. ಅವರ ಕುಟುಂಬ ಹಾಗೂ ಪ್ರೀಯ ಪಾತ್ರರಿಗೆ ನನ್ನ ಸಾಂತ್ವನ" ಎಂದು ಹೇಳಿದ್ದರು.
ಇರ್ಫಾನ್ ಖಾನ್ ಅವರ ನಿಧನದ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, "ಇರ್ಫಾನ್ ಖಾನ್ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರು ಓರ್ವ ಬಹುಮುಖಿ ಪ್ರತಿಭೆಯಾಗಿದ್ದರು. ಜಾಗತಿಕ ಸಿನಿಮಾ ಮತ್ತು ಟಿವಿ ಮಾಧ್ಯಮದಲ್ಲಿ ಅವರು ಭಾರತದ ಜನಪ್ರೀಯ ರಾಯಭಾರಿಯಾಗಿದ್ದರು. ಮುಂಬರುವ ದಿನಗಳಲ್ಲಿ ಇರ್ಫಾನ್ ಕೊರತೆ ಎದ್ದು ಕಾಣಲಿದೆ. ದುಃಖದ ಈ ಸನ್ನಿವೇಶದಲ್ಲಿ ಅವರ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಅಭಿಮಾನಿಗಳಿಗೆ ನನ್ನ ಸಾಂತ್ವನ" ಎಂದು ಹೇಳಿದ್ದಾರೆ.