ಬೆಂಗಳೂರು : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ದಿನೇ ದಿನೇ ರಂಗೇರುತ್ತಿರುವ ಬೆನ್ನಲ್ಲೇ ಚುನಾವಣೆಗೆ ಸಂಬಂಧಿಸಿದ ಕನ್ನಡ ಸಿನಿಮಾವೊಂದು ತೆರೆ ಕಾಣಲು ಸಿದ್ಧವಾಗಿದೆ. 


COMMERCIAL BREAK
SCROLL TO CONTINUE READING

ನಟಿ ಪ್ರಿಯಾಮಣಿ ಸಖತ್ ಬೋಲ್ಡ್ ಆಗಿ ನಟಿಸಿರುವ ರಾಜಕೀಯ ಕಥೆಯಾಧಾರಿತ ಚಿತ್ರ 'ಧ್ವಜ' ಇದೇ ಏಪ್ರಿಲ್ 27ರಂದು ತೆರೆ ಕಾಣಲಿದೆ. ಪಕ್ಕಾ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಪ್ರಿಯಾಮಣಿ, ತಮ್ಮ ಮದುವೆಯ ನಂತರ ಮಾಡುತ್ತಿರುವ ಮೊದಲ ಚಿತ್ರ ಇದಾಗಿದೆ. 


ಚಿಕ್ಕಂದಿನಿಂದಲೂ ಅಧಿಕಾರ, ಕುರ್ಚಿಯ ವ್ಯಾಮೋಹ ಹೊಂದಿದ್ದ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗಿರುವಂತಹ ರಾಜಕೀಯ ವ್ಯಕ್ತಿಯ ಪಾತ್ರದಲ್ಲಿ ಪ್ರಿಯಾಮಣಿ ಅಭಿನಯಿಸಿದ್ದಾರೆ. ಈ ಚಿತ್ರ ತಮಿಳಿನ 'ಕೋಡಿ' ಚಿತ್ರದ ರಿಮೇಕ್ ಆಗಿದ್ದು, ರಾಜಕಾರಣಿ ಪಾತ್ರ ಸಖತ್ ಚಾಲೆಂಜಿಂಗ್ ಆಗಿತ್ತು ಎಂದು ಪ್ರಿಯಾಮಣಿ ಹೇಳಿದ್ದಾರೆ. 



ಸಿನಿಮಾಟೋಗ್ರಾಫೆರ್ ಆಗಿರುವ ಅಶೋಕ್ ಕಶ್ಯಪ್ ನಿರ್ದೇಶನ ಈ ಚಿತ್ರ ನಿರ್ಮಿಸಿದ್ದು, ಸಿಜಿಬೆ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಸುಧಾ ಬಸವೇಗೌಡ ಬಂಡವಾಳ ಹೂಡಿದ್ದಾರೆ. ಪ್ರಿಯಾಮನಿಗೆ ನಾಯಕನಾಗಿ ರವಿಗೌಡ ನಟಿಸಿದ್ದಾರೆ. ದಿವ್ಯಾ ಉರುಡುಗ, ಟಿ.ಎನ್.ಸೀತಾರಾಂ, ವೀಣಾಸುಂದರ್, ತಬಲ ನಾಣಿ, ಮಂಡ್ಯ ರವಿ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. 


ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಸೋಶಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡಿವೆ. ಇತ್ತೀಚೆಗಷ್ಟೇ ಚಿತ್ರದ ನಾಯಕ ರವಿಗೌಡ ಅಭಿನಯದ ಧ್ವಜ ಹಾಡು ಯುಟ್ಯೂಬ್ 'ನಲ್ಲಿ ಬಿಡುಗಡೆಯಾಗಿದ್ದು, ಸಖತ್ ಫೇಮಸ್ ಆಗಿದೆ. ಅದರಲ್ಲೂ ಚಿತ್ರದ ನಾಯಕ ಅಭಿನಯದ 'ಊರಾ ದೇವ್ರು ಕೊಟ್ಟಾ ಕಣ್ಲಾ..' ಹಾಡು ಒಂದೇ ದಿನದಲ್ಲಿ ಸುಮಾರು 60 ಸಾವಿರ ಜನ ವೀಕ್ಷಿಸಿದ್ದಾರೆ.


ಮತ್ತೊಂದೆಡೆ, ನಟಿ ಕಂ ರಾಜಕಾರಣಿ ರಮ್ಯಾ ಅವರ ಜೀವನಾಧಾರಿತ ಸಿನಿಮಾ 'ಧ್ವಜ' ಎಂಬ ವದಂತಿಗಳು ಕೇಳಿಬರುತ್ತಿದೆ. ಆದರೆ ಈ ವದಂತಿಯನ್ನು ಚಿತ್ರರಂಗ ಅಲ್ಲಗಳೆದಿದೆ. ಇದುವರೆಗೂ ರೋಮ್ಯಾಂಟಿಕ್ ಹಾಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಮಣಿ ಇದೀಗ ಪೊಲಿಟಿಕಲ್ ಲೇಡಿ ಆಗಿ ತೆರೆಯ ಮೇಲೆ ಬರುತ್ತಿದ್ದು, ಅಭಿಮಾನಿಗಳು ಪ್ರಿಯಾಮಣಿ ಅಭಿನಯ ಒಪ್ಪಿ ಭೇಷ್ ಎನ್ನಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.