‘ಬೆಟ್ಟದ ಹೂ’ ಮೂಲಕ ಬಾಲ್ಯದಲ್ಲಿಯೇ ಮೋಡಿ ಮಾಡಿದ್ದ ಪುನೀತ್ ರಾಜ್ ಕುಮಾರ್
1999ರಲ್ಲಿ ಚಿಕ್ಕಮಗಳೂರಿನ ಅಶ್ವಿನಿಯವರನ್ನು ಕೈಹಿಡಿದಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಧೃತಿ ಮತ್ತು ವಂದಿತಾ ಎಂಬ ಪುತ್ರಿಯರಿದ್ದಾರೆ.
ಬೆಂಗಳೂರು: ಕರುನಾಡಿನ ಪ್ರೀತಿಯ ‘ಅಪ್ಪು’, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಧಿವಶ(Puneeth Rajkumar Dead)ರಾಗಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ 46 ವರ್ಷದ ಪುನೀತ್ ಅವರಿಗೆ ಹೃದಯಾಘಾತವಾಗಿತ್ತು. ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ನಟ ಪುನೀತ್ ರಾಜ್ ಕುಮಾರ್ ಇಹಲೋಹ ತ್ಯಜಿಸಿದ್ದಾರೆ.
ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುವ ಪವರಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಕನ್ನಡ ಚಿತ್ರರಂಗದ ಮೇರು ಪ್ರತಿಭೆಯಾಗಿದ್ದರು. ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟನಾಗಿ, ಹಿನ್ನಲೆ ಗಾಯಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಸುಮಾರು 4 ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ ಒಟ್ಟು 14 ಮತ್ತು ನಾಯಕನಾಗಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Breaking News: ನಟ ಪುನೀತ್ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ
ಪುನೀತ್ ರಾಜ್ ಕುಮಾರ್ ಬಾಲ್ಯ
1975ರ ಮಾರ್ಚ್ 17ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್(Dr.Rajkumar) ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದರು. ಡಾ.ರಾಜ್ ದಂಪತಿ ಈ ಮಗುವಿಗೆ ಇಟ್ಟ ಹೆಸರು ಲೋಹಿತ್. ಲೋಹಿತ್ ಮುಂದೆ ಕನ್ನಡಿಗರ ಜನಮನಗೆದ್ದ ಪುನೀತ್ ರಾಜ್ ಕುಮಾರ್ ಆಗಿ ಮಿಂಚಿದ್ದರು. ಅನೇಕ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಪವರ್ ಸ್ಟಾರ್ ಆಗಿ ಬೆಳೆದರು. ಇವರ ಹಿರಿಯ ಸಹೋದರರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕನಟರು.
ಪುನೀತ್ ರಾಜ್ ಕುಮಾರ್ ಡಾ.ರಾಜ್ ದಂಪತಿಯ ಕಿರಿಯ ಮಗುವಾಗಿದ್ದರಿಂದ ಬಹು ಅಕ್ಕರೆಯಲ್ಲಿ ಬೆಳೆದಿದ್ದರು. ಪುನೀತ್ ಮತ್ತು ಸಹೋದರಿ ಪೂರ್ಣಿಮಾರನ್ನು ರಾಜ್ ಕುಮಾರ್ ಅವರು ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್‌ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಪುನೀತ್ ಗೆ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಗಿತ್ತು.
ಬಾಲ ಕಲಾವಿದನಾಗಿ ಸಿನಿಪಯಣ
6 ತಿಂಗಳು ಮಗುವಿದ್ದಾಗ ಪುನೀತ್ 1976ರಲ್ಲಿ ತೆರೆಕಂಡ ‘ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಬಂದ ‘ಸನಾದಿ ಅಪ್ಪಣ್ಣ’, ‘ತಾಯಿಗೆ ತಕ್ಕ ಮಗ’, ‘ವಸಂತ ಗೀತ’, ‘ಭೂಮಿಗೆ ಬಂದ ಭಗವಂತ’, ‘ಭಾಗ್ಯವಂತರು’ ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆಯುವ ಮೂಲಕ ಮೋಡಿ ಮಾಡಿದ್ದರು.
ಭಾಗ್ಯವಂತ ಚಿತ್ರದ ‘ಬಾನ ದಾರಿಯಲ್ಲಿ ಸೂರ್ಯ’, ಚಲಿಸುವ ಮೋಡಗಳು ಚಿತ್ರದ ‘ಕಾಣದಂತೆ ಮಾಯವಾದನೋ’,ಯಾರಿವನು ಚಿತ್ರದ ‘ಕಣ್ಣಿಗೆ ಕಾಣುವ ದೇವರು’ ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಅಪಾರ ಪ್ರಶಂಸೆ ಪಡೆದರು. ‘ಚಲಿಸುವ ಮೋಡಗಳು’ ಮತ್ತು ‘ಎರಡು ನಕ್ಷತ್ರಗಳು’ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು.
ಬಾಲ್ಯದಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದಿದ್ದ ‘ಬೆಟ್ಟದ ಹೂ’
ಬಾಲಕಲಾವಿದನಾಗಿ ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಉತ್ಕೃಷ್ಟ ಚಿತ್ರ ‘ಬೆಟ್ಟದ ಹೂ’. 1984ರಲ್ಲಿ ತೆರೆಕಂಡ ಎನ್.ಲಕ್ಷ್ಮೀ ನಾರಾಯಣ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಬಾಲಕ ರಾಮು ಆಗಿ ನಟಿಸಿದ್ದರು. ಶಾಲೆಗೆ ಹೋಗುವ ಬಡ ಬಾಲಕನೊಬ್ಬನ ತಳಮಳಗಳನ್ನು ಈ ಚಿತ್ರ ಚೆನ್ನಾಗಿ ಬಿಂಬಿಸಿತ್ತು. ಈ ಚಿತ್ರ ಆಂಗ್ಲ ಕಾದಂಬರಿ ‘ವಾಟ್ ದೆನ್ ರಾಮನ್’ ಆಧಾರಿತವಾಗಿತ್ತು. ಈ ಚಿತ್ರದ ಅಭಿನಯಕ್ಕಾಗಿ ಪುನೀತ್ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರೆತಿತ್ತು,
ನಾಯಕ ನಟನಾಗಿ ಪುನೀತ್ ಸಿನಿಜರ್ನಿ
2002ರಲ್ಲಿ ತೆರೆಕಂಡ ಖ್ಯಾತ ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಚಿತ್ರದಿಂದ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದರು. ಈ ಚಿತ್ರ ಅದ್ಧೂರಿ ಯಶಸ್ಸು ಕಂಡಿತು. ಸೂಪರ್ ಡೂಪರ್ ಹಿಟ್ ಆಗಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಬಹುದೊಡ್ಡ ಸೌಂಡ್ ಮಾಡುವ ಮೂಲಕ ಪುನೀತ್ ಅವರಿಗೆ ಭರ್ಜರಿ ಯಶಸ್ಸು ದೊರಕಿಸಿಕೊಟ್ಟಿತ್ತು. ನಂತರ ತೆರೆಗೆ ಬಂದ ‘ಅಭಿ’, ‘ವೀರ ಕನ್ನಡಿಗ’, ‘ಮೌರ್ಯ’, ‘ಆಕಾಶ್’, ‘ನಮ್ಮ ಬಸವ’, ‘ಅಜಯ್’ ಮುಂತಾದ ಚಿತ್ರಗಳು ಬಾಕ್ಸಾಫೀಸಿನಲ್ಲಿ ದಾಖಲೆ ಮಾಡಿದ್ದವು.
ಇದನ್ನೂ ಓದಿ: Live: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಧಿವಶ
ಪುನೀತ್ ರಾಜ್ ಕುಮಾರ್ ನಾಯಕನಾಗಿ ನಟಿಸಿದ ಮೊದಲ 10 ಚಿತ್ರಗಳು ಶತದಿನ ಪೂರೈಸಿದ್ದು ದಾಖಲೆಯಾಗಿದೆ. ನಾಯಕನಾಗಿ 2 ಬಾರಿ ರಾಜ್ಯ ಪ್ರಶಸ್ತಿ, 4 ಫಿಲ್ಮಫೇರ್, 2 ಸೈಮಾ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪವರ್ ಸ್ಟಾರ್ ಪಡೆದುಕೊಂಡಿದ್ದರು.
ಗಾಯಕನಾಗಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಪುನೀತ್ ರಾಜ್ ಕುಮಾರ್ ತಮ್ಮ ಗಾಯನದಿಂದ ಬರುವ ಸಂಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಿದ್ದರು. ಕಿರುತೆರೆಯಲ್ಲಿ ನಿರೂಪಕರಾಗಿ ‘ಕನ್ನಡದ ಕೋಟ್ಯಾಧಿಪತಿ’ ಮತ್ತು ‘ಫ್ಯಾಮಿಲಿ ಪವರ್’ ಎಂಬ ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದರು. ಖ್ಯಾತ ನಟ ರಮೇಶ್ ಅರವಿಂದ್ ಜೀ ವಾಹಿನಿಯಲ್ಲಿ ನಡೆಸಿಕೊಡುತ್ತಿದ್ದ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದ ಮೊಟ್ಟಮೊದಲ ಅತಿಥಿಯಾಗಿ ಭಾಗವಹಿಸಿ ತಮ್ಮ ಜೀವನದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದರು.
ಚಿತ್ರ ನಿರ್ಮಾಪಕರಾಗಿ ‘ಕವುಲುದಾರಿ’, ‘ಮಯಾಬಜಾರ್’ ಮುಂತಾದ ಚಿತ್ರಗಳನ್ನು ತಮ್ಮ ಹೋಮ್ ಬ್ಯಾನರ್‌ನಡಿ ನಿರ್ಮಸಿದ್ದರು. ಪುನೀತ್ ತಮ್ಮ ಪ್ರೋಡಕ್ಸನ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿ ಕೂಡ ನಿರ್ಮಿಸಿದ್ದರು. ತಮ್ಮ ತಾಯಿ ಪಾರ್ವತಮ್ಮನವರ ನೆನಪಿನಲ್ಲಿ ‘PRK’ ಆಡಿಯೋ ಕಂಪನಿಯನ್ನು ಸ್ಥಾಪಿಸಿದ್ದರು.
ಶಕ್ತಿಧಾಮ ಆಶ್ರಮದ ಮೂಲಕ ಸಮಾಜ ಸೇವೆ
ನಟ ಪುನೀತ್ ರಾಜ್ ಕುಮಾರ್ ಅವರು ಮೈಸೂರಿನ ಶಕ್ತಿಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇದಲ್ಲದೆ ‘ಬೆಂಗಳೂರು ಪ್ರೀಮೀಯರ್ ಪುಟ್‌ಬಾಲ್’ ತಂಡದ ಒಡೆತನವನ್ನು ಹೊಂದಿದ್ದರು. ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು LED ಬಲ್ಬ್ ಗಳ ರಾಯಭಾರಿಯಾಗಿದ್ದರು. ಐಪಿಎಲ್ ಟೂರ್ನಿಯ ಪ್ರಾರಂಭದಲ್ಲಿ ಕರ್ನಾಟಕದ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ರಾಯಭಾರಿ ಕೂಡ ಆಗಿದ್ದರು.
1999ರಲ್ಲಿ ಚಿಕ್ಕಮಗಳೂರಿನ ಅಶ್ವಿನಿಯವರನ್ನು ಕೈಹಿಡಿದಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಧೃತಿ ಮತ್ತು ವಂದಿತಾ ಎಂಬ ಪುತ್ರಿಯರಿದ್ದಾರೆ. ಕರುನಾಡಿನ ಜನರ ಪ್ರೀತಿಯ ‘ಅಪ್ಪು’ ಆಗಿ ಖ್ಯಾತಿ ಗಳಿಸಿದ್ದ ಪುನೀತ್ ರಾಜ್ ಕುಮಾರ್ ಸಣ್ಣವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿರುವುದು ಅವರ ಲಕ್ಷಾಂತರ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಪುನೀತ್ ರನ್ನು ಕಳೆದುಕೊಂಡಿರುವ ಕನ್ನಡ ಚಿತ್ರರಂಗವು ಅನಾಥವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ