ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ಇದನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆ ನೀಡಬೇಕು. ಇದು ಹಣದ ಅವ್ಯವಹಾರವಾಗಿರುವುದರಿಂದ ಜಾರಿ ನಿರ್ದೇಶನಾಲಯ ಕೂಡ ಕ್ರಮ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು. 


COMMERCIAL BREAK
SCROLL TO CONTINUE READING

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಬೆಂಗಳೂರಿನಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಿದ್ದರು. ಈಗ ರೌಡಿಗಳೇ ನಾಚುವಂತೆ ಅಬಕಾರಿ ಸಚಿವ ತಿಮ್ಮಾಪುರ ಅವರು ವಾರಕ್ಕೆ 18 ಕೋಟಿ ರೂ. ವಸೂಲಿ ಮಾಡುತ್ತಿದ್ದಾರೆ. ಅಂದರೆ ವರ್ಷಕ್ಕೆ ಸುಮಾರು 900 ಕೋಟಿ ರೂ. ಲಂಚ ಪಡೆಯಲಾಗುತ್ತಿದೆ. ಪ್ರತಿ ಹುದ್ದೆಯ ಅಧಿಕಾರಿಗಳಿಗೆ ಎಷ್ಟು ಲಂಚ ನೀಡಲಾಗುತ್ತಿದೆ ಎಂದು ಮದ್ಯ ಮಾರಾಟಗಾರರ ಸಂಘ ಪತ್ರದಲ್ಲಿ ವಿವರಿಸಿದೆ. ಮುಖ್ಯಮಂತ್ರಿ ಕಚೇರಿಯ ಅಧಿಕಾರಿ, ಪಿಎ, ಪಿಎಸ್‌ ಪಡೆಯುತ್ತಿರುವ ಲಂಚದ ಬಗ್ಗೆಯೂ ವಿವರವಿದೆ. ಸಮಬಾಳು ಸಮಪಾಲು ಎಂಬಂತೆ ಸಚಿವ ತಿಮ್ಮಾಪುರ ಎಲ್ಲರಿಗೂ ಲಂಚ ಹಂಚಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ 40 ಪರ್ಸೆಂಟ್‌ ಎಂದು ಆರೋಪ ಮಾಡಿದ್ದರೂ ಅದಕ್ಕೆ ಸೂಕ್ತ ದಾಖಲೆ ನೀಡಿಲ್ಲ. ಈಗ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಭಿತ್ತಿಪತ್ರ ಅಂಟಿಸುವುದಾದರೆ ನಾನು ಕೂಡ ಬರುತ್ತೇನೆ ಎಂದು ವ್ಯಂಗ್ಯವಾಡಿದರು. 


ಇದನ್ನೂ ಓದಿ:ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ‌: ಬಸವರಾಜ ಬೊಮ್ಮಾಯಿ


ಮದ್ಯ ಮಾರಾಟಗಾರರು ಈ ಕಿರುಕುಳ ವಿರೋಧಿಸಿ ಒಂದು ದಿನ ಬಂದ್‌ ಮಾಡಲಿದ್ದಾರೆ. ಈ ಸರ್ಕಾರ ಆದಾಯಕ್ಕೆ ಮದ್ಯವನ್ನೇ ನಂಬಿಕೊಂಡಿದೆ. ಹೀಗೆ ಬಾರ್‌ಗಳನ್ನು ಬಂದ್‌ ಮಾಡಿದರೆ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಲಿದೆ ಎಂದರು. 


ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದುಕಿನ ತೆರೆದ ಪುಸ್ತಕದಲ್ಲಿ ಕಪ್ಪು ಚುಕ್ಕೆಗಳೇ ತುಂಬಿದೆ. ಅವರ ಕೈ ಕೆಳಗೆ ಕೆಲಸ ಮಾಡುವ ಪೊಲೀಸ್‌ ಅಧಿಕಾರಿಯ ಮುಂದೆ ಅವರೇ ಕುಳಿತು ತನಿಖೆ ಎದುರಿಸುವುದೆಂದರೆ ಅವರಿಗೆ ನಾಚಿಕೆಯಾಗಬೇಕು. ಇಲ್ಲಿ ತನಿಖೆಗೂ ನಿರ್ದಿಷ್ಟ ಸಮಯ ನಿಗದಿಪಡಿಸಿದ್ದು, ಇದು ಹೇಗೆ ಸಾಧ್ಯ ಎಂದು ಅಚ್ಚರಿಯಾಗುತ್ತದೆ ಎಂದರು. 


ಕರುಣೆ ಇಲ್ಲದ ಸರ್ಕಾರ : ಬೆಳಗಾವಿಯ ಸರ್ಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿದ್ದರು. ಆದರೂ ಹಿರಿಯ ಅಧಿಕಾರಿಗಳು ಇದನ್ನು ಕಡೆಗಣಿಸಿದ್ದಾರೆ. ಇದು ಕರುಣೆಯೇ ಇಲ್ಲದ ಸರ್ಕಾರ. ಸುಮಾರು 2 ಲಕ್ಷ ರೂ. ಲಂಚವನ್ನು ರುದ್ರಣ್ಣ ಅವರಿಂದ ಪಡೆಯಲಾಗಿದೆ. ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತ್ರ ಬರೆದ ಮಾದರಿಯಲ್ಲೇ ರುದ್ರಣ್ಣ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಎಂದು ಸಂದೇಶ ಕಳುಹಿಸಿದ್ದಾರೆ. ಪಿಎಸ್‌ಐ ಪರಶುರಾಮ್‌ ಸತ್ತ ಬಳಿಕ ಯಾರನ್ನೂ ಬಂಧನ ಮಾಡಿಲ್ಲ. ರುದ್ರಣ್ಣ ಅವರ ಪ್ರಕರಣ ಅದೇ ರೀತಿ ಆಗುವ ಸಂಭವವಿದೆ. ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧ ತೊಡೆ ತಟ್ಟಿ ಹೋರಾಡಿದ್ದ ಸಿಎಂ ಸಿದ್ದರಾಮಯ್ಯ, ಈಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 


ಇದನ್ನೂ ಓದಿ:ಆಸ್ತಿ ಕಬಳಿಸುವುದು ವಕ್ಫ್‌ ಬೋರ್ಡ್‌ನ ಒಂದು ದಂಧೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ


ಕಾಂಗ್ರೆಸ್‌ ಸರ್ಕಾರ ಬಂದ ನಂತರ ಒಳ್ಳೆಯ ಕಾಲ ಬರುತ್ತದೆ ಎಂದುಕೊಂಡಿದ್ದೆ. ಆದರೆ ಇದು ಅಧಿಕಾರಿಗಳಿಗೆ ಯಮಗಂಡ ಕಾಲ, ಗುತ್ತಿಗೆದಾರರಿಗೆ ರಾಹುಕಾಲ, ರೈತರಿಗೆ ಕೊನೆಗಾಲ, ಜನರಿಗೆ ವಿನಾಶ ಕಾಲ ಎಂಬಂತಾಗಿದೆ. ವಿಧಾನಸೌಧದ ಮುಂಭಾಗ ಸರ್ಕಾರದ ಕೆಲಸ, ದೇವರ ಕೆಲಸ ಎಂದು ಬರೆಸಲಾಗಿದೆ. ಇನ್ನು  ಕಾಂಗ್ರೆಸ್‌ ಸರ್ಕಾರದ ಜೇಬು ತುಂಬುವ ಕೆಲಸ ಎಂದು ಬದಲಾಯಿಸಿಕೊಳ್ಳಲಿ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ