ವಿವಾಹದ ಬಳಿಕ ಮೊದಲಬಾರಿಗೆ ಬಣ್ಣ ಹಚ್ಚಲಿರುವ ರಾಧಿಕಾ ಪಂಡಿತ್
ಬೆಂಗಳೂರು: ಸ್ಯಾಂಡಲ್‌ವುಡ್‌ನ 'ಯಶ'ಸ್ಸಿನ ರಾಣಿ ರಾಧಿಕಾ ಪಂಡಿತ್ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಳಿಕ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ರಾಧಿಕಾಗೆ ನಾಯಕನಾಗಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಅವರು ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ವಿ.ಪ್ರಿಯಾ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇಂದು (ಡಿಸೆಂಬರ್ 1) ಮುಹೂರ್ತ ನೆರವೇರಲಿದ್ದು ಡಿಸೆಂಬರ್ 11 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ. ಚಿತ್ರದ ಶೀರ್ಷಿಕೆಯನ್ನು ಇನ್ನೂ ಇಟ್ಟಿಲ್ಲ.
ಕಥೆಯಲ್ಲಿ ಅಭಿನಯ,ಹಾಸ್ಯ, ಪ್ರೀತಿ ಎಲ್ಲವೂ ಇದೆ. ಚಿತ್ರದ ಶೀರ್ಷಿಕೆ ಬಗ್ಗೆ ಕೆಲವು ಹೆಸರುಗಳು ನಮ್ಮ ಬಳಿ ಇದ್ದು ಸದ್ಯದಲ್ಲಿಯೇ ಅವುಗಳಲ್ಲಿ ಒಂದು ಸೂಕ್ತವಾದದ್ದನ್ನು ಆರಿಸುತ್ತೇವೆ. ಕುಟುಂಬ ಆಧಾರಿತ ಚಿತ್ರವಾಗಿರಲಿದ್ದು ಇದು ವೃದ್ಧರಿಗೂ ಮತ್ತು ಈಗಿನ ಯುವ ಜನಾಂಗಕ್ಕೂ ಇಷ್ಟವಾಗಲಿದೆ ಎನ್ನುತ್ತಾರೆ ಪ್ರಿಯಾ.
ಚಿತ್ರದಲ್ಲಿ ನಾಯಕ ಮತ್ತು ನಾಯಕಿಗೆ ಸಮಾನ ಅವಕಾಶ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರಾಧಿಕಾ ವಿವಾಹವಾಗುವ ಮುನ್ನ ಪತಿ ಯಶ್ ಜೊತೆ 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದಲ್ಲಿ ನಟಿಸಿದ್ದರು.