ಬೆಂಗಳೂರು: ರಂಗಿತರಂಗ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿರುವ ಸ್ಯಾಂಡಲ್ ವುಡ್'ನ ಬಹುನಿರೀಕ್ಷಿತ ಸಿನಿಮಾ 'ರಾಜರಥ' ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.


COMMERCIAL BREAK
SCROLL TO CONTINUE READING

ವಿಭಿನ್ನ ಕಥಾ ಹಂದರವುಳ್ಳ ರಂಗಿತರಂಗ ಸಿನಿಮಾ ನೀಡಿದ ಬಳಿಕ ಅನೂಪ್ ಭಂಡಾರಿ ರಾಜರಥ ಸಿನಿಮಾ ಮಾಡಿದ್ದು, "ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಲ್ಲಿ, ಒಬ್ಳು ಸುಂದರವಾದ ಹುಡ್ಗಿ. ಅವಳಿಗೆ ಒಬ್ಬ ಹುಡ್ಗ ಇದ್ದ. ಆದ್ರೆ ಅವ್ನು ಹೀರೊ ಅಲ್ಲ...’ – ಹೀಗೆ ಸಣ್ಣದೊಂದು ಕನ್‌ಪ್ಯೂಷನ್‌ ಇಟ್ಟುಕೊಂಡೇ ಶುರುವಾಗುವ ‘ರಾಜರಥ’ ಸಿನಿಮಾದ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಮಾಡಿತ್ತು. 


ಇದರೊಂದಿಗೆ ಈ ಚಿತ್ರಕ್ಕಾಗಿ ಆರುಮುಗ ರವಿಶಂಕರ್ ಹಾಡಿರುವ 'ಗಂಡಕ...' ಹಾಡು, ಸೇರಿದಂತೆ ಇತರ ಹಾಡುಗಳೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಹಿಟ್ ಆಗಿವೆ. ಕಾಲೇಜು ಲವ್ ಸ್ಟೋರಿಯನ್ನು ಆಧಾರವಾಗಿಟ್ಟುಕೊಂಡು ಹೆಣೆದಿರುವ ಈ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಜನರು ಏನು ನೋಡಬೇಕೆಂದು ಥಿಯೇಟರ್'ಗೆ ಬರುತ್ತಾರೋ ಅದಕ್ಕಿಂತ ಹೆಚ್ಚಿನದನ್ನು ರಾಜರಥ ನೀಡಲಿದೆ. ಇದು ರಂಗಿತರಂಗ ಚಿತ್ರಕ್ಕಿಂತ ವಿಭಿನ್ನವಾದ ಹೊಸತನದ ಕಥೆ ಹೊಂದಿದೆ ಎಂದು ಚಿತ್ರ ತಂಡ ತಿಳಿಸಿದೆ. 



ಈ ಹಿಂದೆ ರಂಗಿತರಂಗ ಚಿತ್ರದಲ್ಲಿ ಸರಳ ಹುಡಗನಾಗಿ ಕಾಣಿಸಿಕೊಂಡಿದ್ದ ನಿರೂಪ್ ಈ ಬಾರಿ ತರ್ಲೆ ಕಾಲೇಜು ಹುಡಗನಾಗಿ ಮಿಂಚಿದ್ದಾರೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ನಾಯಕಿಯಾಗಿ ಆವಂತಿಕಾ ಶೆಟ್ಟಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರವಿಶಂಕರ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ನಟ ಆರ್ಯ, ರವಿಶಂಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.