ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರ ಖ್ಯಾತಿಯ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದುಬಿದ್ದ ಬಗ್ಗೆ ಹಬ್ಬಿರುವ ವದಂತಿಗಳಿಂದ ರೋಸಿ ಹೋಗಿರುವ ರಕ್ಷಿತ್ ಶೆಟ್ಟಿ ಪೇಸ್ಬುಕ್'ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದುವರೆಗೂ ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದಾಗಿ ಹೇಳಿದ್ದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಜೊತೆಗಿನ ಬ್ರೇಕಪ್ ಬಗ್ಗೆ ಹಬ್ಬಿರುವ ವದಂತಿಯಿಂದಾಗಿ ಮೌನ ಮುರಿದಿದ್ದಾರೆ. ಈ ಬಗ್ಗೆ ಫೇಸ್ಬುಕ್'ನಲ್ಲಿ ಪೋಸ್ಟ್ ಮಾಡಿರುವ ಅವರು, "ರಶ್ಮಿಕಾ ಬಗ್ಗೆ ನಿಮಗೆಲ್ಲಾ ಒಂದು ಅಭಿಪ್ರಾಯ ರೂಪಗೊಂಡಿದೆ. ಆದರೆ ನಾನು ಯಾರನ್ನೂ ದೂರುವುದಿಲ್ಲ. ಏನು ಹೇಳುತ್ತೀವೋ ಏನು ನೋಡುತ್ತೇವೋ ಅದೆಲ್ಲಾ ಸತ್ಯ ಎಂದು ಎಲ್ಲರೂ ನಂಬುತ್ತಾರೆ. ಆದರೆ ಅದೆಲ್ಲಾ ಸತ್ಯ ಆಗಿರಲ್ಲ. ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡಬೇಕು" ಎಂದಿದ್ದಾರೆ. 


ಮುಂದುವರೆದು, "ರಶ್ಮಿಕಾ ಮಂದಣ್ಣ ಅವರನ್ನು ನಾನು 2 ವರ್ಷಗಳಿಂದ ನೋಡುತ್ತಿದ್ದು ಅವರು ಏನು ಎಂಬುದು ನಂಗೆ ಚೆನ್ನಾಗಿ ಗೊತ್ತು. ಯಾವುದೇ ಇಲ್ಲಸಲ್ಲದ ವದಂತಿ ಹಬ್ಬಿಸಬೇಡಿ. ರಶ್ಮಿಕಾ ನೆಮ್ಮದಿ ಹಾಳು ಮಾಡಬೇಡಿ. ನಿಮಗೆ ಇದುವರೆಗೂ ದೊರೆತಿರುವ ಎಲ್ಲಾ ಮಾಹಿತಿ ಸತ್ಯವಲ್ಲ, ಕಪೋಕಲ್ಪಿತ. ಸದ್ಯದಲ್ಲೇ ಎಲ್ಲವೂ ಬಗೆಹರಿಯಲಿದೆ" ಎಂದಿದ್ದಾರೆ.



ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ 'ಕಿರಿಕ್ ಪಾರ್ಟಿ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಇಬ್ಬರೂ ಪ್ರೀತಿಸುತ್ತಿರುವುದಾಗಿ ಹೇಳಿದ್ದರು. ಅದರಂತೆ 2017ರ ಜುಲೈ 3ರಂದು ವಿರಾಜಪೇಟೆಯಲ್ಲಿ ಇವರಿಬ್ಬರ ನಿಶ್ಚಿತಾರ್ಥ ಹಿರಿಯರ ಸಮ್ಮುಖದಲ್ಲಿ ನೆರವೇರಿತ್ತು. ಆದರೆ, ಇತ್ತೀಚೆಗೆ ತೆಲುಗಿನ 'ಗೀತ ಗೋವಿಂದಂ' ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್‌ ಲಿಪ್‌ಲಾಕ್‌ ಮಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ನಂತರ ರಶ್ಮಿಕಾ ಮತ್ತು ರಕ್ಷಿತ್‌ ದೂರವಾಗುತ್ತಿದ್ದಾರೆ ಎಂಬ ವದಂತಿ ಕೂಡ ಹಬ್ಬಿತ್ತು.