ಬಂಡೀಪುರದ ಕಾಡ್ಗಿಚ್ಚು ಕಂಡು ರಶ್ಮಿಕಾ ಮಂದಣ್ಣ ಹೇಳಿದ್ದೇನು?
ನಾವೆಲ್ಲರೂ ಸ್ವಯಂಸೇವಕರಾಗಿ ಅಲ್ಲಿಗೆ ತೆರಳಿ ಬೆಂಕಿ ನಂದಿಸಿ, ಸಾಮಾನ್ಯ ಸ್ಥಿತಿಗೆ ತಂದು ಸುಂದರವಾದ ಅರಣ್ಯವನ್ನು ಮರಳಿ ಪಡೆಯೋಣ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಬೆಂಗಳೂರು: ಕಳೆದ ಮೂರು ದಿನಗಳಿಂದ ಬಂಡೀಪುರ ರಾಷ್ಟೀಯ ಉದ್ಯಾನದಲ್ಲಿ ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚಿಗೆ ಸಾವಿರಾರು ಮರ-ಗಿಡಗಳು ಆಹುತಿಯಾಗಿವೆ. ಈಗಾಗಲೇ ಕರ್ನಾಟಕ ಸರ್ಕಾರ ಬೆಂಕಿ ನಿಯಂತ್ರಿಸಲು ಕ್ರಮ ಕೈಗೊಂಡಿದೆ. ನೂರಾರು ಸ್ವಯಂ ಸೇವಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟರಾದ ದರ್ಶನ್, ದುನಿಯಾ ವಿಜಯ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕರು ಬಂಡೀಪುರ ಉಳಿಸಲು ಮನವಿ ಮಾಡಿದ್ದಾರೆ. ಇವರ ಸಾಲಿನಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣಾ ಸಹ ಈಗ ಪರಿಸರ ಉಳಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಶ್ಮಿಕಾ ಮಂದಣ್ಣ, "ಬಂಡೀಪುರ ಅರಣ್ಯದ ಸಸ್ಯವರ್ಗ ಮತ್ತು ಪ್ರಾಣಿಗಳ ರಕ್ಷಣೆಗೆ ಇದು ಪ್ರಾರ್ಥಿಸುವ ಸಮಯ. ಕಳೆದ ಮೂರು ದಿನಗಳಿಂದ ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚಿನಿಂದಾಗಿ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಭಾರೀ ನಷ್ಟವಾಗಿದೆ. ಹೀಗಾಗಿ ನಾವೆಲ್ಲರೂ ಸ್ವಯಂಸೇವಕರಾಗಿ ಅಲ್ಲಿಗೆ ತೆರಳಿ ಬೆಂಕಿ ನಂದಿಸಿ, ಸಾಮಾನ್ಯ ಸ್ಥಿತಿಗೆ ತಂದು ಸುಂದರವಾದ ಅರಣ್ಯವನ್ನು ಮರಳಿ ಪಡೆಯೋಣ" ಎಂದು ಕರೆ ನೀಡಿದ್ದಾರೆ.