ಬೆಂಗಳೂರು: ಸ್ಯಾಂಡಲ್‍ವುಡ್‌ನಲ್ಲಿ ಹಾಟ್ ಟಾಪಿಕ್ ಎನ್ನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಬ್ರೇಕಪ್ ಸ್ಟೋರಿಗೆ ಕೊನೆಗೂ ಅಂತ್ಯ ಸಿಕ್ಕಿದೆ. ಇಷ್ಟು ದಿನ ರಕ್ಷಿತ್ ಜೊತೆ ಬ್ರೇಕಪ್ ತನ್ನ ಖಾಸಗಿ ವಿಚಾರ ಎಂದಿದ್ದ ರಶ್ಮಿಕಾ ಮಂದಣ್ಣ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. 


COMMERCIAL BREAK
SCROLL TO CONTINUE READING

ತೆಲುಗಿನ ದೈನಿಕ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ತನ್ನ ಪ್ರೀತಿ ಬ್ರೇಕಪ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, "ಅಪ್ಪ ಅಮ್ಮನ ಜತೆಗೆ ನನಗೆ ಸಲುಗೆ ಜಾಸ್ತಿ. ನನ್ನ ಬಗ್ಗೆ ಅವರಿಗೆ ಭರವಸೆ ಜಾಸ್ತಿ. ಅಮ್ಮನ್ನನ್ನು ಫ್ರೆಂಡ್ ತರಹ ತಮಾಷೆಗೆ ಆಟ ಆಡಿಸುತ್ತಿರುತ್ತೇನೆ. ನನ್ನ ಫೀಲಿಂಗ್ಸ್ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ. ಎಲ್ಲರಿಗೂ ಬಾಯ್‌ಫ್ರೆಂಡ್ಸ್ ಇರುತ್ತಾರೆ. ನನಗ್ಯಾಕೆ ಇಲ್ಲಮ್ಮಾ. ನನಗೂ ಬಾಯ್‍ಫ್ರೆಂಡ್ ಬೇಕು" ಎಂದು ಅಮ್ಮನನ್ನು ಬಹಳಷ್ಟು ಸಲ ಕೇಳಿದ್ದೇನೆ. 


ಹುಡುಗರನ್ನು ನೋಡಿದಾಗ ಈ ಹುಡುಗ ಚೆನ್ನಾಗಿದ್ದಾನೆ, ಆ ಹುಡುಗ ಚೆನ್ನಾಗಿದ್ದಾನೆ ಎಂದು ಸಾಕಷ್ಟು ಮಂದಿಯನ್ನು ತೋರಿಸುತ್ತಿದ್ದೆ. ಅಮ್ಮ ಕೂಡಾ ಅವುಗಳನ್ನು ತಮಾಷೆಯಾಗಿಯೇ ತೆಗೆದುಕೊಳ್ಳುತ್ತಿದ್ದರು. ಕಿರಿಕ್ ಪಾರ್ಟಿ ಸಿನಿಮಾ ಶೂಟಿಂಗ್ ಸಮಯದಲ್ಲಿ ರಕ್ಷಿತ್ ಶೆಟ್ಟಿ ಬಗ್ಗೆ ಅಭಿಮಾನ ಉಂಟಾಯಿತು. ಅದು ಸ್ನೇಹವಾಗಿ ನಂತರ ಪ್ರೀತಿಯಾಗಿ ಬದಲಾಯಿತು. ಇದೇ ಸಂಗತಿಯನ್ನು ಮೊದಲು ಅಮ್ಮನ ಬಳಿ ಹೇಳಿದೆ. "ನಾನು ತೆಗೆದುಕೊಂಡದ್ದು ಸರಿಯಾದ ನಿರ್ಧಾರವೇ" ಎಂದು ಕೇಳಿದೆ. ಏಕೆಂದರೆ ಅಪ್ಪ-ಅಮ್ಮನಿಗೆ ಜೀವನದಲ್ಲಿ ಅನುಭವವಿರುತ್ತದೆ, ನಮಗೆ ಈ ವಯಸ್ಸಿನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ, ಯಾಕೆಂದರೆ ಆ ವಯಸ್ಸಲ್ಲಿ ನಮ್ಮ ಕಣ್ಣಿಗೆ ಎಲ್ಲರೂ ಒಳ್ಳೆಯವರಾಗಿಯೇ ಕಾಣಿಸುತ್ತಾರೆ. ಆದರೆ ಅಪ್ಪ ಅಮ್ಮ ಮಾತ್ರ ನಮಗೆ ಯಾವುದು ಒಳ್ಳೆಯದು ಎಂದು ಆಲೋಚಿಸುತ್ತಾರೆ. ಆಗ ನನ್ನ ಅಭಿಪ್ರಾಯಕ್ಕೆ ಬೆಲೆ ಕೊಟ್ಟ ಅಮ್ಮ "ನಿನ್ನಿಷ್ಟ ನಿನಗೇನು ಅನ್ನಿಸುತ್ತದೋ ಅದನ್ನು ಮಾಡು, ನಿನ್ನಿಷ್ಟದಂತೆಯೇ ಆಗಲಿ" ಎಂದರು.


ವಿವಾದಗಳ ಬಗ್ಗೆ ಮನದಾಳದ ನೋವು ತೋಡಿಕೊಂಡ ರಶ್ಮಿಕಾ ಮಂದಣ್ಣ


ಅದರಂತೆ ಎರಡೂ ಕುಟುಂಬದವರೂ ನಮ್ಮ ಪ್ರೀತಿಗೆ ಬೆಲೆ ಕೊಟ್ಟು ನಿಸ್ಚಿತಾರ್ಥವನ್ನೂ ಮಾಡಿದರು. ಆದರೆ ನಮ್ಮ ಪ್ರೀತಿ ನಿಶ್ಚಿತಾರ್ಥಕ್ಕೆ ಕೊನೆಯಾಯಿತು. ನಿಶ್ಚಿತಾರ್ಥ ಆದ ನಂತರ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಶುರುವಾದವು. ನಮ್ಮಿಬ್ಬರ ನಡುವೆ ತಪ್ಪು ಒಪ್ಪುಗಳು ಕಾಣಿಸಿದವು. ಹೀಗಾಗಿ ಮದುವೆಗೂ ಮುನ್ನ ಬ್ರೇಕಪ್ ನಿರ್ಣಯ ತೆಗೆದುಕೊಂಡೆವು. ಮನಸ್ತಾಪಗಳು ಚಿಕ್ಕದಾಗಿದ್ದಾಗಲೇ ಸಂಬಂಧ ಮುರಿದುಕೊಳ್ಳುವುದು ಒಳ್ಳೆಯದು, ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ತುಂಬಾ ಕಷ್ಟವಾಗುತ್ತದೆ ಎನಿಸಿ ನಾವು ಬ್ರೇಕಪ್ ತೀರ್ಮಾನಕ್ಕೆ ಬಂದೆವು ಎಂದು ರಶ್ಮಿಕಾ ಹೇಳಿದ್ದಾರೆ.


ಈ ಘಟನೆಯ ಬಳಿಕ ನಾನು ಪ್ರೀತಿಯ ಬಗ್ಗೆ ನಂಬಿಕೆ ಕಳೆದು ಕೊಂಡಿಲ್ಲ. ಪ್ರೀತಿಯ ಬಗ್ಗೆ ನನ್ನ ನಂಬಿಕೆ ಬದಲಾಗಿಲ್ಲ. ಪ್ರೀತಿ ದೊಡ್ಡದು. ಆದರೆ ಅದು ನೋಡುವ ಕಣ್ಣು, ಅನುಭವಿಸುವವರ ಮನಸ್ಸನ್ನು ಅವಲಂಬಿಸಿರುತ್ತದೆ ಎಂದು ರಶ್ಮಿಕ ಅಭಿಪ್ರಾಯ ಪಟ್ಟಿದ್ದಾರೆ.