ಐಟಿ ದಾಳಿ: ಮುಂಬೈನಿಂದ ಬೆಂಗಳೂರಿಗೆ ಬಂದ ಯಶ್ ಹೇಳಿದ್ದೇನು?
ಪ್ರಜೆಗಳಾಗಿ ನಾವು ಕಾನೂನಿಗೆ ತಲೆ ಬಾಗಲೇಬೇಕು ಎಂದು ಯಶ್ ಹೇಳಿದ್ದಾರೆ.
ಬೆಂಗಳೂರು: ಚಂದನವನದ ಪ್ರಸಿದ್ಧ ನಟರಾದ ಕಿಚ್ಚ ಸುದೀಪ್, ಯಶ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಅವರ ಮನೆಗಳ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.
ಐಟಿ ದಾಳಿ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ ಯಶ್, ಸುದ್ದಿಗಾರರೊಂದಿಗೆ ಮಾತನಾಡುತ್ತಾ "ನನ್ನ ಕುಟುಂಬದವರನ್ನು ಸಂಪರ್ಕಿಸಲು ಮೊಬೈಲ್ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ನನಗೆ ಐಟಿ ದಾಳಿ ನಡೆದಿದೆ ಎಂದಷ್ಟೇ ತಿಳಿದಿದೆ. ಅದನ್ನು ಬಿಟ್ಟು ಹೆಚ್ಚಿನ ಮಾಹಿತಿ ಇಲ್ಲ" ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಕೆಜಿಎಫ್ ಚಿತ್ರದ ಯಶಸ್ಸಿನ ಕಾರಣಕ್ಕೆ ಐಟಿ ದಾಳಿ ನಡೆದಿದೆ ಎಂದು ಊಹಿಸುವುದು ತಪ್ಪು. ಈಗಿನ್ನೂ ಮನೆಗೆ ಹೋಗುತ್ತಿದ್ದೇನೆ. ನಂತರ ಏಕೆ ದಾಳಿ ನಡೆದಿದೆ ಎಂದು ತಿಳಿಯಲಿದೆ. ಏನೇ ಆಗಲಿ, ಪ್ರಜೆಗಳಾಗಿ ನಾವು ಕಾನೂನಿಗೆ ತಲೆ ಬಾಗಲೇಬೇಕು ಎಂದು ಯಶ್ ಹೇಳಿದರು.
ಐಟಿ ಅಧಿಕಾರಿಗಳು ಯಶ್ ಮನೆ ಮೇಲಷ್ಟೇ ಅಲ್ಲದೆ, ಅವರ ಪತ್ನಿ ರಾಧಿಕಾ ಪಂಡಿತ್ ಅವರ ಗಾಯತ್ರಿ ನಗರದ ಮನೆ, ಯಶ್ ಅವರ ಕತ್ರಿಗುಪ್ಪೆ, ಹೊಸಕೆರೆಹಳ್ಳಿ ನಿವಾಸ, ಕತ್ರಿಗುಪ್ಪೆಯಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಜೊತೆಗೆ ರಾಧಿಕಾ ಅವರ ತಂದೆ ಕೃಷ್ಣಪ್ರಸಾದ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗಾಗಿ ಐಟಿ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.