ಸಾಹಸಸಿಂಹ ವಿಷ್ಣುವರ್ಧನ್ ಜನ್ಮ ದಿನ; ಇತ್ಯರ್ಥವಾಗದ ವಿಷ್ಣು ಸ್ಮಾರಕ ವಿವಾದ
ವಿಷ್ಣು ಸ್ಮಾರಕ ನಿರ್ಮಾಣ ಸಂಬಂಧ ಎಲ್ಲಾ ಮುಖ್ಯಮಂತ್ರಿಗಳಿಗೂ ಒಂಭತ್ತು ವರ್ಷಗಳಿಂದ ಮನವಿ ನೀಡುತ್ತಲೇ ಬಂದಿದ್ದೇವೆ. ಇನ್ನೂ ಎಷ್ಟು ವರ್ಷ ಬೇಕೋ ಅವರೇ ನಿರ್ಧರಿಸಬೇಕು ಎಂದು ಭಾರತೀ ವಿಷ್ಣುವರ್ಧನ್ ಹೇಳಿದರು.
ಬೆಂಗಳೂರು: ಪ್ರತಿವರ್ಷ ಸೆಪ್ಟೆಂಬರ್ 18 ಬಂತೆಂದರೆ ಸ್ಯಾಂಡಲ್ವುಡ್ ಕಿಂಗ್, ಕೋಟಿಗೊಬ್ಬ, ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ನಗರದ ಉತ್ತನಹಳ್ಳಿಯ ಅಭಿಮಾನ್ ಸ್ಟುಡಿಯೋದಲ್ಲಿ ಬೆಳಗಿನಿಂದಲೇ ಸಾವಿರಾರು ಅಭಿಮಾನಿಗಳು ಬರುತ್ತಿದ್ದು, ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಮತ್ತೊಂದೆಡೆ ರಾಜ್ಯಾದ್ಯಂತ ವಿಷ್ಣುವರ್ಧನ್ ಅವರ 68ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಸಂಘಗಳಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರೆ, ಮತ್ತೆ ಕೆಲವು ಸಂಘಟನೆಗಳು ರಕ್ತದಾನ, ಹಣ್ಣುಹಂಪಲು, ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಇದೇ ರೀತಿಯಲ್ಲಿ ಎಲ್ಲೆಡೆ ಹುಟ್ಟುಹಬ್ಬ ಆಚರಣೆ ಮುಂದುವರೆದಿದೆ.
ಇದೇ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಜಯನಗರದ ನಿವಾಸದಲ್ಲಿ ಅಭಿಮಾನಿಗಳು ಆಗಮಿಸಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಪತ್ನಿ ಭಾರತಿ ವಿಷ್ಣುವರ್ಧನ್ ಅವರು, "ನಾನಿರುವವರೆಗೂ ಯಜಮಾನರ ಹುಟ್ಟುಹಬ್ಬದ ಆಚರಣೆ ಪ್ರತಿ ವರ್ಷವೂ ನಡೆಯುತ್ತಿರುತ್ತದೆ. ವಿಷ್ಣು ಸ್ಮಾರಕ ನಿರ್ಮಾಣ ಸಂಬಂಧ ಎಲ್ಲಾ ಮುಖ್ಯಮಂತ್ರಿಗಳಿಗೂ ಒಂಭತ್ತು ವರ್ಷಗಳಿಂದ ಮನವಿ ನೀಡುತ್ತಲೇ ಬಂದಿದ್ದೇವೆ. ಇನ್ನೂ ಎಷ್ಟು ವರ್ಷ ಬೇಕೋ ಅವರೇ ನಿರ್ಧರಿಸಬೇಕು" ಎಂದರು.
ಮುಂದುವರೆದು ಮಾತನಾಡಿದ ಅವರು, ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಬಹುದೊಡ್ಡ ಯೋಜನೆ ಹಾಕಲಾಗಿದೆ. ಆದರೂ ಭೂ-ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಇನ್ನೆಷ್ಟು ದಿನಗಳು ಬೇಕೊ ಗೊತ್ತಿಲ್ಲ. ಅಭಿಮಾನಿಗಳು ರೊಚ್ಚಿಗೆದ್ದರೆ ಕಚೇರಿಗೆ ಮುತ್ತಿಗೆ ಹಾಕುತ್ತಾರೆ. ಇಂತಹ ಘಟನೆ ಆಗುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು.