ಬಿಡುಗಡೆಯಾದ ಮೂರೇ ದಿನದಲ್ಲಿ 120 ಕೋಟಿ ರೂ. ದಾಖಲೆ ಬರೆದ ಸಂಜು!
ಬಾಲಿವುಡ್ ನಟ ಸಂಜಯ್ ದತ್ ಜೀವನ ಆಧಾರಿತ ಚಿತ್ರ `ಸಂಜು` ಬಿಡುಗಡೆಯಾದ ಮೂರು ದಿನಗಳಲ್ಲಿಯೇ 120 ಕೋಟಿ ರೂ. ದಾಖಲೆ ಹಣ ಗಳಿಸಿದೆ.
ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಜೀವನ ಆಧಾರಿತ ಚಿತ್ರ 'ಸಂಜು' ಬಿಡುಗಡೆಯಾದ ಮೂರು ದಿನಗಳಲ್ಲಿಯೇ 120 ಕೋಟಿ ರೂ. ದಾಖಲೆ ಹಣ ಗಳಿಸಿದೆ.
ಜೂನ್ 29ರಂದು ಬಿಡುಗಡೆಯಾಗಿದ್ದ ರಾಜ್ ಕುಮಾರ್ ಹಿರಾನಿ ನಿರ್ದೇಶನದ, ರಣಬೀರ್ ಕಪೂರ್ ಅಭಿನಯದ ಚಿತ್ರ 'ಸಂಜು' ಮೊದಲ ದಿನದಿಂದಲೇ ಬಾಕ್ಸ್ ಆಫೀಸ್ನಲ್ಲಿ ಸಾಕಷ್ಟು ಸದ್ದುಮಾಡಿತ್ತು. ಆದರೆ ಭಾನುವಾರದವರೆಗೆ ಒಟ್ಟು 120 ಕೋಟಿ ರೂ. ದಾಖಲೆ ಹಣ ಗಳಿಸುವ ಮೂಲಕ ಈ ಹಿಂದೆ ದಾಖಲೆ ಮಾಡಿದ್ದ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತ್, ಸಲ್ಮಾನ್ ಖಾನ್ ಅಭಿನಯದ ರೇಸ್ 3, ಟೈಗರ್ ಶರ್ಫ್ ಅಭಿನಯದ ಬಾಗಿ 2 ಮತ್ತು ಅಜಯ್ ದೇವಗನ್ ಅಭಿನಯದ ರೇಡ್ ಚಿತ್ರಗಳ ಗಳಿಕೆಯನ್ನೂ ಹಿಂದಿಕ್ಕಿದೆ. ಈ ಮೂಲಕ ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಮೊದಲ ಮೂರು ದಿನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್,ಕೇವಲ ಮೂರೇ ದಿನಗಳಲ್ಲಿ ಸಂಜು ಚಿತ್ರ 120 ಕೋಟಿ ರೂ. ಗಳಿಸಿರುವುದು ಅದ್ಭುತ ಆರಂಭವಾಗಿದೆ. ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರ ಬಿಡುಗಡೆಯ ನಂತರ ಮೊದಲ ಮೂರು ದಿನದಲ್ಲಿ 114.93 ಕೋಟಿ ರೂ. ಗಳಿಸಿತ್ತು. ಈಗ ಸಂಜು ಚಿತ್ರ ಈ ದಾಖಲೆಯನ್ನು ಮುರಿದು ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಂದು ಹೇಳಿದ್ದಾರೆ.
ಸದ್ಯ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಂಜು ಚಿತ್ರದಲ್ಲಿ ನಟ ರಣ್‍ಬೀರ್ ಕಪೂರ್, ಸಂಜಯ್ ದತ್ ರವರ ಪಾತ್ರ ನಿರ್ವಹಿಸಿದ್ದಾರೆ. ರಣ್‍ಬೀರ್ ಜೊತೆ ಸೋನಂ ಕಪೂರ್, ಪರೇಷ್ ರಾವಲ್, ದಿಯಾ ಮಿರ್ಜಾ ಮತ್ತು ಅನುಷ್ಕಾ ಶರ್ಮಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.