ಬೆಂಗಳೂರು: ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 14ರ ವಿಜೇತರಾಗಿ ವಿಶ್ವಪ್ರಸಾದ್ ಹೊರಹೊಮ್ಮಿದ್ದಾರೆ. ಶಿಶು ತಾನ್ ಸೇನ್ ಎಂದೇ ಖ್ಯಾತರಾಗಿದ್ದ ಜ್ಞಾನೇಶ್ ಹಾಗೂ ಕೀರ್ತನಾ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದು, ತೇಜಸ್ ಶಾಸ್ತ್ರೀ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಶನಿವಾರ(ಮೇ.27) ನಗರದ ಮಾನ್ಯತಾ ಟೆಕ್ ಪಾರ್ಕ್ ನ ವೈಟ್ ಆರ್ಕೆಟ್ ಸಭಾಭವನದಲ್ಲಿ ನಡೆದ ಈ ಜನಪ್ರಿಯ ಕಾರ್ಯಕ್ರಮದ ಫಿನಾಲೆಯನ್ನು ಮೊದಲ ಬಾರಿಗೆ ನೇರಪ್ರಸಾರ ಮಾಡಲಾಯಿತು. 


ಸೆಮಿಫೈನಲ್ ನಿಂದ ಫೈನಲ್ ಹಣಾಹಣೆಗೆ ಐದು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಉಡುಪಿಯ ಅಭಿಜಿತ್ ಭಟ್, ಇಟಗಿಯ ವಿಶ್ವಪ್ರಸಾದ್, ಬಳ್ಳಾರಿಯ ಜ್ಞಾನೇಶ್, ಬೆಂಗಳೂರಿನ ಕೀರ್ತನಾ ಹಾಗೂ ಕ್ವಾಟರ್ ಫೈನಲ್ ನಿಂದ ನೇರವಾಗಿ ಫೈನಲ್ಸ್ ಗೆ ತಲುಪಿದ್ದ ಚನ್ನಗಿರಿಯ ತೇಜಸ್ ಶಾಸ್ತ್ರೀ ಕಣದಲ್ಲಿದ್ದರು. ಸರಿಗಮಪ ಲಿಟ್ಲ್ ಚಾಂಪ್ಸ್‌ ಸೀಸನ್‌ 14 ರ ಫಿನಾಲೆಯ ವಿನ್ನರ್ ಆಗಿ ಇಟಗಿಯ ವಿಶ್ವಪ್ರಸಾದ್ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.


ಈ ಫಿನಾಲೆಯಲ್ಲಿ ವಿನ್ನರ್ ಆದ ವಿಶ್ವಪ್ರಸಾದ್ ಗೆ ಐದು ಲಕ್ಷ, ದ್ವಿತೀಯ ಸ್ಥಾನ ಪಡೆದಿರುವ ಜ್ಞಾನೇಶ್ ಹಾಗೂ ಕೀರ್ತನ ಅವರಿಗೆ ತಲಾ 2 ಲಕ್ಷ ಹಾಗೂ ಮೂರನೇ ಸ್ಥಾನ ಪಡೆದಿರುವ ತೇಜಸ್ ಶಾಸ್ತ್ರೀಗೆ 50,000 ರೂಪಾಯಿಯನ್ನು ಬಹುಮಾನವಾಗಿ ನೀಡಲಾಗಿದೆ. 


ಸತತ 14 ಸೀಸನ್ ಗಳನ್ನು ಪೂರೈಸಿರುವ ಸರಿಗಮಪದಲ್ಲಿ ಪ್ರತಿ ಬಾರಿಯೂ ಒಂದಲ್ಲಾ ಒಂದು ವಿಶೇಷತೆ ಇದ್ದೇ ಇರುತ್ತದೆ.  ಸಂಗೀತ ಮಹಾಗುರು ಹಂಸಲೇಖ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಸೀಸನ್ ನ ತೀರ್ಪುಗಾರರಾಗಿದ್ದರು.