ಬೆಂಗಳೂರು: ಬಹುನಿರೀಕ್ಷಿತ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್​' ಸಿನಿಮಾದ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದ್ದು, ಇದೀಗ ಸಿನಿಮಾಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಶಾಕಿಂಗ್ ನ್ಯೂಸ್ ನೀಡಿದೆ.


COMMERCIAL BREAK
SCROLL TO CONTINUE READING

ಹೌದು, ಈ ಬಿಗ್ ಬಜೆಟ್ ಸಿನಿಮಾಕ್ಕೆ, ಅಕ್ಟೋಬರ್ 11 ರಿಂದಲೇ ಪ್ರೀ ಬುಕ್ಕಿಂಗ್ ಪ್ರಾರಂಭವಾಗಲಿದ್ದು,  ಚಿತ್ರದ ಟಿಕೆಟ್ ಬೆಲೆ 400,500 ಹಾಗೂ 1000 ಕ್ಕೇರಿಸಲಿದ್ದಾರೆ ಎನ್ನಲಾಗಿದೆ. ಮಲ್ಟಿಪ್ಲೇಕ್ಸ್ ಗಳಲ್ಲಿ 'ದಿ ವಿಲನ್' ಅಬ್ಬರ ನೋಡಲು 400, 500 ಹಾಗೂ 1000 ರೂ. ಫಿಕ್ಸ್ ಮಾಡಬೇಕೆಂದು ನಿರ್ದೇಶಕ ಪ್ರೇಮ್ ಮಲ್ಟಿಪ್ಲೇಕ್ಸ್ ಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಪ್ರಪಂಚದಾದ್ಯಂತ ಸುಮಾರು 1 ಸಾವಿರ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಯಿದೆ. ವಿಲ್ಲನ್ ಸಿನಿಮಾವನ್ನು ಥಿಯೇಟರ್ ಗಳ ಬಾಲ್ಕನಿಯಲ್ಲಿ ನೋಡಬೇಕಾದರೇ ಹೆಚ್ಚು ಹಣ ನೀಡಿ ಟಿಕೆಟ್ ಖರೀದಿಸಬೇಕಾಗುತ್ತದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಪ್ರೇಮ್ ಹಿಂದಿ, ತೆಲುಗು ತಮಿಳು ಸಿನಿಮಾಗಳನ್ನು ನೋಡಲು ಪ್ರೇಕ್ಷಕರು 1 ಸಾವಿರ ರು ವರೆಗೆ ನೀಡಲು ಸಿದ್ದರಿರುವುದನ್ನು ನಾನು ನೋಡಿದ್ದೇನೆ, ದುಪ್ಪಟ್ಟು ಹಣ ನೀಡಿ ಆ ಸಿನಿಮಾಗಳನ್ನು ನೋಡುತ್ತೀರಿ ಎಂದಾದರೇ  ಕನ್ನಡ ಸಿನಿಮಾ ಏಕೆ ನೋಡಬಾರದು, ನಾವು ನಿರ್ಮಾಪಕರನ್ನು ಗಮನದಲ್ಲಿರಿಸಿಕೊಂಡು ಅತ್ಯಲ್ಪ ಪ್ರಮಾಣದಲ್ಲಿ ಸಿನಿಮಾ ಟಿಕೆಟ್ ದರ ಏರಿಸಿದ್ದೇವೆ, ನಮ್ಮ ಪ್ರೇಕ್ಷಕರು ಇದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದಿದ್ದಾರೆ.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ 'ದಿ ವಿಲನ್​' ಅಕ್ಟೋಬರ್ 18 ರಂದು ಆಯುಧ ಪೂಜೆ ದಿನ ನಿಮ್ಮೆಲ್ಲರನ್ನು ರಂಜಿಸಲು ತೆರೆಗೆ ಬರುತ್ತಿದ್ದು, ಸಿನಿಮಾ ಬಿಡುಗಡೆಯಾದ ಮೊದಲ ನಾಲ್ಕು ದಿನ ಸರ್ಕಾರಿ ರಜೆ ಇರುವುದರಿಂದಲೂ ಸಿನಿಮಾ ನೋಡಲು ಬರುವವರ ಸಂಖ್ಯೆಯೂ ಹೆಚ್ಚೇ ಇರುತ್ತದೆ. ಈ ಎಲ್ಲಾ ಕಾರಣದಿಂದ ಪ್ರೇಮ್, ಸಿನಿಮಾ ಟಿಕೆಟ್ ದರ ಏರಿಸುವಂತಹ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.


ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದು, ಈಗ ಈ ಇಬ್ಬರು ಹಿರೋಗಳ ಅಭಿಮಾನಿಗಳು ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಈಗ ಈ ಚಿತ್ರ ಬಿಡುಗಡೆಯಾಗುತ್ತಿದೆ.