ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ 'ಪಿಎಂ ನರೇಂದ್ರ ಮೋದಿ' ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ  ಸುಪ್ರೀಂಕೋರ್ಟ್ ವಜಾಗೊಳಿಸಿದೆ. 


COMMERCIAL BREAK
SCROLL TO CONTINUE READING

ಚಿತ್ರ ಬಿಡುಗಡೆಗೆ ತಡೆಯಾಜ್ಞೆ ಕೋರಿ ಕಾಂಗ್ರೆಸ್ ನ ಕಾರ್ಯಕರ್ತ ಅಮನ್ ಪನ್ವಾರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಲನಚಿತ್ರ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆಯೇ ಎಂದು ನಿರ್ಧರಿಸುವುದು ಚುನಾವಣಾ ಆಯೋಗದ ಜವಾಬ್ದಾರಿ. ಹಾಗಾಗಿ ಚಿತ್ರ ಬಿಡುಗಡೆ ಬಗ್ಗೆ ನಿರ್ಧರಿಸುವುದು ಚುನಾವಣಾ ಆಯೋಗಕ್ಕೆಸಂಬಂಧಪಟ್ಟ ವಿಚಾರ. ಈಗಾಗಲೇ ಇದರಿಂದ ನ್ಯಾಯಾಲಯದ ಸಮಯ ವ್ಯರ್ಥವಾಗಿದೆ ಎಂದು ಹೇಳಿ, ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿದೆ. ಅಷ್ಟೇ ಅಲ್ಲದೆ, ಚಿತ್ರದ ಟ್ರೇಲರ್ ವೀಕ್ಷಿಸಲೂ ಸಹ ಕೋರ್ಟ್ ನಿರಾಕರಿಸಿದೆ. 


ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಇನ್ನೂ ಪ್ರಮಾಣಪತ್ರ ದೊರೆತಿಲ್ಲ. ಹಾಗಾಗಿ ಚಿತ್ರ ಬಿಡುಗಡೆಯ ವಿಚಾರವಾಗಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಚಿತ್ರ ಬಿಡುಗಡೆಯಿಂದ ಮುಂಬರುವ ಚುನಾವಣೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಮತ್ತು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಯಾವ ರೀತಿಯಲ್ಲಿ ಲಾಭವಾಗಲಿದೆ ಎಂಬುದನ್ನು ನಿರ್ಧರಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.