ಚೆನ್ನೈ: ಸಾಲಿಗ್ರಾಮಂದಲ್ಲಿರುವ ಸೂಪರ್‌ಸ್ಟಾರ್ ತಲಪತಿ ವಿಜಯ್ ಅವರ ಮನೆಯಲ್ಲಿ ಬಾಂಬ್ ಹಾಕಿರುವ ಬಗ್ಗೆ ಚೆನ್ನೈನ ಪೊಲೀಸ್ ಕಂಟ್ರೋಲ್ ರೂಂಗೆ  ಭಾನುವಾರ ಮಧ್ಯರಾತ್ರಿ ಕರೆ ಮೂಲಕ ಮಾಹಿತಿ ಬಂದಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು ಕರೆ ಮಾಡಿದವನನ್ನು ಪತ್ತೆಹಚ್ಚಲಾಗಿದೆ ಎಂದು ಖಚಿತಪಡಿಸಿದ್ದಾರೆ.


ಪೊಲೀಸ್ ಕಂಟ್ರೋಲ್ ರೂಂಗೆ ಮಧ್ಯರಾತ್ರಿ ಬಾಂಬ್ ಬೆದರಿಕೆ ಕರೆ ಬಂದಿತು. ಪೊಲೀಸ್ ತಂಡಗಳು ಮತ್ತು ಬಾಂಬ್ ಸ್ಕ್ವಾಡ್ ಮನೆಗೆ ನುಗ್ಗಿ, ಮನೆಯ ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಎಲ್ಲವೂ ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ ಎಂದು ಅವರು ಹೇಳಿದರು.


ಈ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿರುವ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿದವರನ್ನು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮರಕ್ಕಣಂನಲ್ಲಿ ಪತ್ತೆ ಮಾಡಲಾಗಿದೆ. ಕರೆ ಮಾಡಿದ್ದ ಯುವಕ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಇದೊಂದು ವಂಚನೆಯ ಕರೆ ಎಂದು ತಿಳಿಸಿದ್ದಾರೆ.


ಕರೆ ಮಾಡಿ ಸುಳ್ಳು ಬೆದರಿಕೆ ಒಡ್ಡಿದ್ದ 21 ವರ್ಷದ ಯುವಕನಿಗೆ ಎಚ್ಚರಿಕೆ ನೀಡಿ ಬಿಡಲಾಗಿದೆ. ಆತನ ಕುಟುಂಬದವರಿಗೂ ಮುಂದೆ ಹೀಗಾಗದಂತೆ ನಿಗಾವಹಿಸುವಂತೆ ಸೂಚಿಸಲಾಗಿದೆ ಎಂದವರು ಮಾಹಿತಿ ನೀಡಿದರು.


ನಟ ವಿಜಯ್ ಮನೆಯಲ್ಲಿ ಬಾಂಬ್ ಹಾಕಿರುವ ಬಗ್ಗೆ ಬೆದರಿಕೆ ಕರೆ ಮಾಡಿರುವ ಯುವಕನಿಗೆ ಇತರರ ಫೋನ್‌ನಿಂದ ಇಂತಹ ವಂಚನೆ ಕರೆ ಮಾಡುವ ಅಭ್ಯಾಸವಿದೆ. ಈ ಹಿಂದೆ ಅವರು ವಿಐಪಿ ನಿವಾಸಗಳಿಗೆ ಇಂತಹ ವಂಚನೆ ಕರೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.


ಅಂತೆಯೇ ಮೆಗಾಸ್ಟಾರ್ ರಜನಿಕಾಂತ್ ಅವರ ಪೋಸ್ ಗಾರ್ಡನ್ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಕಳೆದ ತಿಂಗಳು ಬೆದರಿಕೆ ಕರೆ ಮಾಡಲಾಗಿತ್ತು,  ಕಡಲೂರಿನ ಮಾನಸಿಕ ವಿಕಲಚೇತನ ವ್ಯಕ್ತಿಯೊಬ್ಬ ಈ ರೀತಿ ಬೆದರಿಕೆ ಕರೆ ಮಾಡಿದ್ದರು.