ಹೈದರಾಬಾದ್: ತೆಲುಗು ನಟ ಮಹೇಶ್ ಬಾಬು ಮಲತಾಯಿ ಹಾಗೂ ಖ್ಯಾತ ನಿರ್ದೇಶಕಿ ಜಿ. ವಿಜಯ ನಿರ್ಮಲಾ(73) ಅವರು ಗುರುವಾರ ಇಲ್ಲಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 


COMMERCIAL BREAK
SCROLL TO CONTINUE READING

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ ನಿರ್ಮಲಾ ಅವರಿಗೆ ಹಾರ್ಟ್ ಅಟ್ಯಾಕ್ ಆದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ನಂಕರ್‌ರಮ್‌ಗುಡದಲ್ಲಿರುವ ಮನೆಯಲ್ಲಿ ದರ್ಶನಕ್ಕೆ ಇಡಲಾಗುವುದು. ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.


ಬಾಲನಟಿಯಾಗಿ ವೃತ್ತಿ ಜೀವನ ಆರಂಭಿಸಿದ ವಿಜಯ ನಿರ್ಮಲಾಅವರು, ಐದನೇ ವಯಸ್ಸಿನಲ್ಲಿ, 1950 ರ ತಮಿಳು ಚಿತ್ರ "ಮಚ್ಚಾ ರೆಕ್ಕೈ" ಯಲ್ಲಿ ನಟಿಸಿದರು. ಇದಾದ ನಾಲ್ಕು ವರ್ಷಗಳ ಬಳಿಕ ಅವರು ಪಾಂಡುರಂಗ ಮಹಾತ್ಯಂ ಚಿತ್ರದೊಂದಿಗೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು.


ತೆಲುಗು, ತಮಿಳು, ಮಲಯಾಳಂ ಭಾಷೆಯ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಜಯ ನಿರ್ಮಲಾ ನಟಿಸಿದ್ದು, 44 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಜಗತ್ತಿನಲ್ಲೇ ಅತ್ಯಧಿಕ ಚಿತ್ರಗಳನ್ನು ನಿರ್ದೇಶಿಸಿದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದಿರುವ ವಿಜಯ ನಿರ್ಮಲಾ ಅವರ ಹೆಸರ 2002ರಲ್ಲಿ ಗಿನ್ನಿಸ್ ಬುಕ್‌ನಲ್ಲೂ ಸ್ಥಾನ ಪಡೆದಿದೆ.