ರಾಜಕೀಯ ಎಂಟ್ರಿಗೆ ಸದ್ದಿಲ್ಲದೇ ವೇದಿಕೆ ಸಿದ್ದ ಪಡಿಸಿಕೊಳ್ಳುತ್ತಿರುವ ರಿಯಲ್ ಸ್ಟಾರ್
ರಾಜಕೀಯದ ಬದಲಿಗೆ ಪ್ರಜಾಕೀಯ ಸೃಷ್ಟಿಸುತ್ತಿರುವ ಸೂಪರ್ ಸ್ಟಾರ್.
ಬೆಂಗಳೂರು: "ಸಮಸ್ಯೆ ಎಲ್ಲಿದೆಯೋ ಅಲ್ಲೇ ಪರಿಹಾರ ಕಂಡುಕೊಳ್ಳಬೇಕು" ಎಂದು ತಿಳಿಸಿರುವ ಉಪ್ಪಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಹಿಡಿಯಲು ಹೊಸದೊಂದು ಪರಿಹಾರ ಕಂಡು ಹಿಡಿಯಲು ಹೊರಟಿದ್ದಾರೆ. ಅದೇನು ಅಂತೀರಾ ಅದೇ ಉಪ್ಪಿ ಅವರು ಇನ್ನು ಮುಂದೆ ಮಾಡಲು ಹೊರಟಿರುವ ಫೇಸ್ ಬುಕ್ ಲೈವ್. ಈ ಕಾರ್ಯಕ್ರಮವು ವಾರಕ್ಕೊಮ್ಮೆ ನಡೆಯಲಿದ್ದು, ಉಪ್ಪಿ ಪ್ರತಿ ವಾರ ಪ್ರತಿ ಕ್ಷೇತ್ರಕ್ಕೂ ಸಂಬಂಧಪಟ್ಟಂತೆ ಆಯಾ ಕ್ಷೇತ್ರಗಳ ಪರಿನಿತರೊಂದಿಗೆ ಪರಿಹಾರಗಳನ್ನು ಹುಡುಕಲಿದ್ದಾರೆ.
ವೈವಿಧ್ಯಮಯ ಚಿತ್ರಗಳನ್ನು ಮಾಡುವ ಮೂಲಕ ಜನರ ಮನ ಸೆಳೆದಿರುವ ರಿಯಲ್ ಸ್ಟಾರ್ ಉಪೇಂದ್ರ, ಈ ರೀತಿಯ ಕಾರ್ಯಕ್ರಮಗಳ ಮೂಲಕ ಸದ್ದಿಲ್ಲದೇ ತಮ್ಮ ರಾಜಕೀಯಕ್ಕೆ ವೇದಿಕೆಯನ್ನು ಸಿದ್ದಪದಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ರಾಜಕೀಯ ಬೇಡ, ಅದರ ಬದಲಿಗೆ ಪ್ರಜಾಕೀಯ ಸೃಷ್ಟಿಯಾಗಬೇಕು ಎಂಬ ಕನಸನ್ನು ಎಲ್ಲರಲ್ಲೂ ಬಿತ್ತುತ್ತಿದ್ದಾರೆ. ಅದಕ್ಕಾಗಿ ವಾರದಲ್ಲಿ ಒಮ್ಮೆ ಫೇಸ್ಬುಕ್ ಲೈವ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರತೀವಾರ ಒಂದೊಂದು ವಿಚಾರದ ಬಗ್ಗೆ ಬೇರೆ ಬೇರೆ ಕ್ಷೇತ್ರದ ತಜ್ಞರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಚರ್ಚೆ ನಡೆಸಿದ ನಂತರ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನೂ ತಿಳಿಸಿಕೊಡಲಿದ್ದಾರೆ. ಭಾನುವಾರ ಮಧ್ಯಾಹ್ನ ಉಪೇಂದ್ರ ಅವರು ತಮ್ಮ ಫೇಸ್ಬುಕ್ ಲೈವ್ ನಲ್ಲಿ ರೈತರ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸಿದರು. ಈ ಚರ್ಚೆಯಲ್ಲಿ ಕೃಷಿ ತಜ್ಞರು, ಯುವಕರು ಮತ್ತು ರೈತರು ಪಾಲ್ಗೊಂಡಿದ್ದರು. ರೈತ ಮುಖಂಡರ ಜೊತೆ ಸಾವಯವ ಕೃಷಿ, ಮಿಶ್ರ ಬೇಸಾಯ, ಶೂನ್ಯ ಬಂಡವಾಳಗಳ ಸಮಾಲೋಚನೆ ನಡೆಸಿದ ಉಪ್ಪಿ ರೈತರೊಬ್ಬರು ಶೂನ್ಯ ಬಂಡವಾಳದಿಂದ ಹೆಚ್ಚು ಹಣ ಗಳಿಸಿರುವುದನ್ನು ಅಂಕಿ ಅಂಶಗಳ ಮೂಲಕ ತಿಳಿಸಿದರು.
ಈ ವಾರ ಫೇಸ್ ಬುಕ್ ಲೈವ್ ನಲ್ಲಿ ಸಮಾಲೋಚನೆ ನಡೆಸಿದ ನಂತರ "ಯುವ ಜನತೆ ಗ್ರಾಮಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುವುದನ್ನು ಬಿಡಬೇಕು, ಹಳ್ಳಿಗಳಲ್ಲಿಯೇ ವ್ಯವಸಾಯದಲ್ಲಿ ತೊಡಗಿ, ಸಾವಯವ ಪದ್ಧತಿ ಮೂಲಕ ಉತ್ತಮ ಬೆಳೆ ಬೆಳೆಯಬೇಕು" ಎಂದು ಕರೆ ನೀಡಿದರು.