ಬೆಳಗಾವಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ನಗರದ ಕೆ.ಎಲ್.ಇ. ಶತಮಾನೋತ್ಸವ ಸ್ಮಾರಕ ಭವನದ ಡಾ.ಬಿ.ಎಸ್.ಕೋಡ್ಕಿಣಿ ಸಭಾಂಗಣದಲ್ಲಿ  ಏರ್ಪಡಿಸಲಾಗಿರುವ ಮೂರು ದಿನಗಳ ಕನ್ನಡ ಚಲನಚಿತ್ರೋತ್ಸವ ಸೋಮವಾರ (ಡಿ.18) ಉದ್ಘಾಟನೆಗೊಂಡಿದೆ.


COMMERCIAL BREAK
SCROLL TO CONTINUE READING

ಭಾಷೆ ಸತ್ತರೆ ಮನುಷ್ಯ ಸತ್ತಂತೆ; ಕನ್ನಡ ಚಲನಚಿತ್ರದ ಸರ್ವತೋಮುಖ ಬೆಳವಣಿಗೆಗೆ ಕೈಜೋಡಿಸಿದ ಉತ್ತರ ಕರ್ನಾಟಕ ಜನರ ಪ್ರೀತಿಗೆ ಇಡೀ ಉದ್ಯಮವೇ ಋಣಿಯಾಗಿದೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಡಾ.ಜಯಮಾಲಾ ಹೇಳಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಬೆಳಗಾವಿಯಲ್ಲಿ ಒಂದು ಕಾಲದಲ್ಲಿ ಕನ್ನಡ ಚಿತ್ರಪ್ರದರ್ಶನ ಕಷ್ಟಸಾಧ್ಯವಾಗಿತ್ತು. ಚಿತ್ರಮಂದಿರ ಮತ್ತು ಪ್ರೇಕ್ಷಕರ ಮೇಲೆ ಕಲ್ಲು ತೂರಾಟ ನಡೆದ ಪ್ರಸಂಗಗಳು ನಡೆಯುತ್ತಿದ್ದವು. ಅಂತಹ ಬೆಳಗಾವಿ ನಗರದಲ್ಲಿ ಇಂದು ಐದಾರು ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದರು.


ಬೆಂಗಳೂರು ಕೇಂದ್ರೀಕೃತಗೊಂಡಿರುವ ಚಿತ್ರೋದ್ಯಮ ಉತ್ತರ ಕರ್ನಾಟಕ ಕಡೆಗೂ ಆಸಕ್ತಿ ತೋರಿಸಬೇಕು ಎಂದು ಮನವಿ ಮಾಡಿಕೊಂಡರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಚಿತ್ರೋದ್ಯಮ, ಪ್ರದರ್ಶನ ಮತ್ತು ತಾಂತ್ರಿಕ ಬೆಳವಣಿಗೆಗೆ ಅಕಾಡೆಮಿಯು ಹಲವಾರು ರೀತಿಯಲ್ಲಿ ಶ್ರಮಿಸುತ್ತಿದೆ ಎಂದರು.


ಸದಭಿರುಚಿಯ ಚಿತ್ರಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರೋತ್ಸವ ಆಯೋಜಿಸಲಾಗುತ್ತಿದೆ. ಪ್ರಥಮ ಪ್ರಯತ್ನದಲ್ಲಿಯೇ ಉತ್ತಮ ಚಿತ್ರ ನಿರ್ಮಾಣ ಮಾಡಿದ ನಿರ್ದೇಶಕರಿಗೆ ಪ್ರೋತ್ಸಾಹಿಸಲು ಅವರ ಚಿತ್ರಗಳನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಕೆ.ಎಲ್.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ವಿವೇಕ ಸಾವಜಿ, ಡಾ.ರಾಜಾಶೇಖರ್ ಮತ್ತಿತರರು ಉಪಸ್ಥಿತರಿದ್ದರು.


ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್ ಸ್ವಾಗತಿಸಿದರು. ಚಿತ್ರೋತ್ಸವ ಸಂಚಾಲಕ ನಟರಾಜ್ ವಂದಿಸಿದರು.


ನಗರದ ಕೆ.ಎಲ್.ಇ. ಶತಮಾನೋತ್ಸವ ಸ್ಮಾರಕ ಭವನದ ಡಾ.ಬಿ.ಎಸ್.ಕೋಡ್ಕಿಣಿ ಸಭಾಂಗಣದಲ್ಲಿ ಮಂಗಳವಾರ (ಡಿ.18) ಒಟ್ಟಾರೆ ಮೂರು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.


ಡಿಸೆಂಬರ್ 18ರ ಚಿತ್ರಪ್ರದರ್ಶನ:


  • ಬೆಳಿಗ್ಗೆ 10 ಗಂಟೆ- ಶುದ್ಧಿ(ಕನ್ನಡ)

  • ಮಧ್ಯಾಹ್ನ 2 ಗಂಟೆ- ಒಂದಲ್ಲಾ ಎರಡಲ್ಲಾ(ಕನ್ನಡ)

  • ಸಂಜೆ 5.30 ಗಂಟೆ- ಒಂದು ಮೊಟ್ಟೆಯ ಕಥೆ(ಕನ್ನಡ)


ಡಿಸೆಂಬರ್ 19 ರ ಚಿತ್ರಪ್ರದರ್ಶನ:


  • ಬೆಳಿಗ್ಗೆ 10 ಗಂಟೆ- ಸಾವಿತ್ರಿಬಾಯಿ ಫುಲೆ(ಕನ್ನಡ)

  • ಮಧ್ಯಾಹ್ನ 2 ಗಂಟೆ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು(ಕನ್ನಡ)

  • ಸಂಜೆ 5.30 ಗಂಟೆ- ಅಮ್ಮಚ್ಚಿಯೆಂಬ ನೆನಪು(ಕನ್ನಡ)