ಅತಿ ಶೀಘ್ರದಲ್ಲಿ ವಿಷ್ಣುವರ್ಧನ್ ಸ್ಮಾರಕ ಕುರಿತು ನಿರ್ಧಾರ- ಸಿಎಂ ಭರವಸೆ
ವಿಷ್ಣುವರ್ಧನ್ ಸ್ಮಾರಕ ಕುರಿತ ವಿಚಾರದಲ್ಲಿ ಯಾವುದೇ ಗೊಂದಲ ಬೇಡ- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ರೆಬೆಲ್ಸ್ಟಾರ್ ಅಂಬರೀಷ್ ವಿಧಿವಶರಾದ ಬೆನ್ನಲ್ಲೇ ಅವರ ಕುಚುಕು ಗೆಳೆಯ ಸಾಹಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಸಂಘರ್ಷ ತಾರಕಕ್ಕೇರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ವಿಷ್ಣುವರ್ಧನ್ ಅವರ ಸ್ಮಾರಕ ಕುರಿತ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಡಾ ರಾಜಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ರಂತಹ ಮಹನೀಯರನ್ನು ಸ್ಮರಿಸುವ ವಿಚಾರದಲ್ಲಿ ನಾನು ಬದ್ಧನಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತಿ ಶೀಘ್ರದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
4 ಗಂಟೆ ಕಾದರೂ ಸಿಎಂ ಸಿಗಲಿಲ್ಲ:
ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರವಾಗಿ ಸರ್ಕಾರ ವಿಳಂಭ ಮಾಡಿರುವುದಕ್ಕೆ ಅಳಿಯ ಅನಿರುದ್ದ್ ಅಕ್ರೋಶ ವ್ಯಕ್ತಪಡಿಸಿದ್ದರು. ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ವಿಳಂಬದ ನೀತಿ ಅನುಸರಿಸುವುದಕ್ಕೆ ಕಿಡಿ ಕಾರಿದ್ದ ಅನಿರುದ್ದ್ ಖಂಡಿತವಾಗಿಯೂ ನಮಗೆ ಬೇಜಾರು ಎನ್ನುವುದಕ್ಕಿಂತಲೂ ತುಂಬಾ ದುಃಖವಾಗುತ್ತಿದೆ ಈಗಂತೂ ನಮ್ಮ ತಾಳ್ಮೆ ಮೀತಿ ಮೀರಿ ಹೋಗಿದೆ ಎಂದಿದ್ದರು.
ಸ್ಮಾರಕ ನಿರ್ಮಾಣ ವಿಚಾರವಾಗಿ ಮಾತನಾಡಲು ಸಿಎಂ ಭೇಟಿಗೆ ಹೋದಾಗ ಕಚೇರಿಯಲ್ಲೇ 4 ಗಂಟೆ ಕಾಯಿಸಿದರು. ಸಿಎಂ ಭೇಟಿಗೆ ಸಮಯ ಕೊಡಿ ಎಂದು ಕಾರ್ಯದರ್ಶಿಗೆ ಕೇಳಿಕೊಂಡರೂ ಸಾಧ್ಯವಾಗಿಲ್ಲ. ಹೀಗೆ ಉಡಾಫೆ ಮಾಡಿದರೆ ನಾವೇನು ಮಾಡುವುದು. ಮಾನ-ಮರ್ಯಾದೆ ಗೌರವ ಏನಾದರು ಇದ್ದರೆ ಸ್ಮಾರಕ ನಿರ್ವಿುಸಿಕೊಡಲಿ. ಇದು ಸರ್ಕಾರದ ಕೆಲಸ. ನಾವು ಪದೇಪದೇ ಮನವಿ ಮಾಡುವ ಅಗತ್ಯವಿಲ್ಲ ಎಂದು ಅನಿರುದ್ಧ್ ಬುಧವಾರ ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಉಡಾಫೆ ಸಿಎಂ ಎಂಬರ್ಥದಲ್ಲಿ ಅನಿರುದ್ಧ್ ಮಾಡಿದ್ದ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯಿಸಿದ್ದ ಸಿಎಂ ಕುಮಾರಸ್ವಾಮಿ, ವಿಷ್ಣುವರ್ಧನ್ ನಿಧನರಾದಾಗ ನಾನು ಸಿಎಂ ಆಗಿರಲಿಲ್ಲ. ಇಷ್ಟು ವರ್ಷದಲ್ಲಿ ಏನೇನಾಗಿದೆಯೋ ನನಗೆ ಗೊತ್ತಿಲ್ಲ. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕೆಂದು ತಿರುಗೇಟು ನೀಡಿದ್ದಾರೆ.
ಅಭಿಮಾನಿಗಳ ಹೃದಯವೇ ವಿಷ್ಣು ಅವರ ದೊಡ್ಡ ಸ್ಮಾರಕ:
ಈ ವಾಕ್ಸಮರದ ಬೆನ್ನಲ್ಲೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಸ್ವಗೃಹದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಭಾರತಿ ವಿಷ್ಣುವರ್ಧನ್, "ಎಲ್ಲ ಅಭಿಮಾನಿಗಳ ಹೃದಯದಲ್ಲಿ ವಿಷ್ಣು ಸ್ಮಾರಕವಿದೆ. ಆದ್ದರಿಂದ ಅಭಿಮಾನಿಗಳ ಪ್ರೀತಿ ಅಷ್ಟೇ ಸಾಕು. ನಾವು ಏನು ಮಾಡಿದರೂ ಸ್ಮಾರಕ ನಿರ್ಮಾಣವಾಗಲಿಲ್ಲ. ಆದ್ದರಿಂದ ವಿಷ್ಣುವರ್ಧನ್ ಅವರಿಗೆ ಇಷ್ಟವಾಗಿದ್ದ ಮೈಸೂರಿಗೆ ಹೋಗಿದ್ದು, ನಮಗೆ ಸ್ಮಾರಕ ನಿರ್ಮಾಣವಾದ್ರು ಸಂತೋಷ, ಇಲ್ಲದ್ದಿದರೆ ನಮಗೇನೂ ಅಸಮಾಧಾನವಿಲ್ಲ. ಯಾವುದಕ್ಕೂ ನಾವು ವಾದ ಮಾಡಲು ಹೋಗುವುದಿಲ್ಲ. ಒಂದು ವೇಳೆ ಬೆಂಗಳೂರಿನಲ್ಲಿ ಸ್ಮಾರಕ ಮಾಡುವುದಾದರೆ ಅಭಿಮಾನ ಸ್ಟುಡಿಯೋದಲ್ಲಿ ಮಾಡಿ, ಇಲ್ಲದಿದ್ದರೆ ಮೈಸೂರಿನಲ್ಲಿ ನಿರ್ಮಿಸಿ" ಎಂದು ಆಗ್ರಹಿಸಿದ್ದರು.