ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಯಾಕೆ ರಿಮೇಕ್ ಸಿನಿಮಾ ಮಾಡುವುದಿಲ್ಲ ಗೊತ್ತಾ..?
‘ನಾನು ಎಂದಿಗೂ ರಿಮೇಕ್ ಸಿನಿಮಾ ಮಾಡುವುದಿಲ್ಲ. ಈ ಸಮಯದಲ್ಲಿ ನಮ್ಮ ಉದ್ಯಮಕ್ಕೆ ಅದರ ಅಗತ್ಯವಿಲ್ಲ`
ಬೆಂಗಳೂರು: ಅಭಿಮಾನಿಗಳಿಂದ ಸಿಂಪಲ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರ ಮತ್ತು ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಈ ನಟ ತಮ್ಮ ಪ್ರತಿಯೊಂದು ಚಿತ್ರದಲ್ಲೂ ಏನಾದರೂ ವಿಶೇಷವಾದದ್ದನ್ನು ಪ್ರಯೋಗ ಮಾಡುತ್ತಿರುತ್ತಾರೆ. ಪಕ್ಕಾ ಸ್ವಮೇಕ್ ಸಿನಿಮಾಗಳನ್ನು ಮಾಡುವ ರಕ್ಷಿತ್ ಶೆಟ್ಟಿ ಇದುವರೆಗೆ ಯಾವುದೇ ರಿಮೇಕ್ ಸಿನಿಮಾ ಮಾಡುವ ಗೋಜಿಗೆ ಹೋಗಿಲ್ಲ. ತಾವು ಏಕೆ ರಿಮೇಕ್ ಸಿನಿಮಾ ಮಾಡುವುದಿಲ್ಲವೆಂಬುದನ್ನು ಸ್ವತಃ ಸಿಂಪಲ್ ಸ್ಟಾರ್ ಅವರೇ ಬಹಿರಂಗಪಡಿಸಿದ್ದಾರೆ.
‘ನಾನು ಎಂದಿಗೂ ರಿಮೇಕ್ ಸಿನಿಮಾ ಮಾಡುವುದಿಲ್ಲ. ಈ ಸಮಯದಲ್ಲಿ ನಮ್ಮ ಉದ್ಯಮಕ್ಕೆ ಅದರ ಅಗತ್ಯವಿಲ್ಲ. ನಾವು ನಮ್ಮ ಚಿತ್ರಗಳನ್ನು ಇಡೀ ಜಗತ್ತಿನಲ್ಲಿಯೇ ಪ್ರದರ್ಶಿಸಲು ಪ್ರಯತ್ನಿಸುತ್ತಿರುವಾಗ ರಿಮೇಕ್ ಸಿನಿಮಾಗಳನ್ನು ತಪ್ಪಿಸಬೇಕು. ನಮ್ಮದೇಯಾದ ಹೊಸ ವಿಷಯದೊಂದಿಗೆ ಬರಲು ಇದು ಸರಿಯಾದ ಸಮಯ. ನಾರ್ಕೋಸ್ ಅಥವಾ ಕ್ರೌನ್(Narcos or Crown)ನಂತಹ ಶೋಗಳು ತುಂಬಾ ಜನಪ್ರಿಯವಾಗಿವೆ. ಏಕೆಂದರೆ ಅವರು ತಮ್ಮ ಪ್ರದೇಶ ಮತ್ತು ಪ್ರೇಕ್ಷಕರಿಗೆ ಹೊಂದುವಂತಹ ಸತ್ಯವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕರ್ನಾಟಕ ಸೇರಿದಂತೆ ಎಲ್ಲೆಡೆ ಏನಾಗುತ್ತಿದೆ ಎಂದು ಜನರು ತಿಳಿದುಕೊಳ್ಳಲು ಬಯಸುತ್ತಾರೆ. ಹೀಗಾಗಿ ಸ್ವಂತ ಕಥೆಗಳನ್ನು ಅನ್ವೇಷಿಸಲು ನಾವು ಪ್ರಯತ್ನಿಸಬೇಕು. ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸಿನಿಮಾಗಳನ್ನು ಮಾಡಬೇಕು’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಪೃಥ್ವಿ ಅಂಬರ್- ಮಾನ್ವಿತಾ ಜೋಡಿ
‘ಪ್ರತಿ ಚಿತ್ರದಲ್ಲೂ ಹೊಸ ವಿಷಯ ಅಥವಾ ಪ್ರಕಾರಗಳನ್ನು ಪ್ರಯತ್ನಿಸುವುದನ್ನು ನಾನು ಮುಂದುವರೆಸುತ್ತೇನೆ. ಜನರಿಗೆ ಇಷ್ಟವಾಗುವಂತಹ ಚಿತ್ರಗಳನ್ನು ತಯಾರಿಸಲು ಇಷ್ಟಪಡುತ್ತೇನೆ. ಫಲಿತಾಂಶದ ಬಗ್ಗೆ ನಾನು ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ನನ್ನದೇಯಾದ ಮಾರ್ಕೆಟ್ ಸೃಷ್ಟಿ ಮಾಡಿಕೊಂಡಿದ್ದೇನೆ. ಹೀಗಾಗಿ ಹೆಚ್ಚಿನದ್ದನ್ನು ಅನ್ವೇಷಿಸಲು ನನಗೆ ಸಾಧ್ಯವಾಗಿದೆ. ಇದಕ್ಕಾಗಿಯೇ ನಾನು ಹೊಸ ವಿಷಯಗಳನ್ನು ತೆರೆಮೇಲೆ ತರಲು ಪ್ರಯತ್ನಿಸುತ್ತೇನೆ. ಇದು ವಿನೋದ ಮತ್ತು ಹೊಸತನವನ್ನು ತರುತ್ತದೆ. ನಾನು ಮೈಥಲಾಜಿಕಲ್ (mythological) ಸಿನಿಮಾ ಮಾಡಲು ಹಂಬಲಿಸುತ್ತೇನೆ. ಆದರೆ ನನಗೆ ಇನ್ನೂ ಅದಕ್ಕೆ ಅವಕಾಶ ಸಿಕ್ಕಿಲ್ಲ. ನಾನು ಡಾ.ರಾಜ್ ಕುಮಾರ್ ಅವರ ಪೌರಾಣಿಕ ಸಿನಿಮಾಗಳ ದೊಡ್ಡ ಅಭಿಮಾನಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪುರಾಣದ ಪ್ರತಿ ಪುಸ್ತಕವನ್ನು ನಾನು ಸಂಗ್ರಹಿಸಿ ಇಟ್ಟುಕೊಂಡಿದ್ದೇನೆ. ನನಗೆ ಇದು ಕೇವಲ ಪುರಾಣ ಮಾತ್ರವಲ್ಲ ನಮ್ಮ ದೇಶದ ಪ್ರಾಚೀನ ಇತಿಹಾಸ’ ಅಂತಾ ಅವರು ಹೇಳಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ..!
‘ನೀವು ನಮ್ಮ ಪ್ರಾಚೀನ ಪುರಾಣಗಳ ಆಳಕ್ಕೆ ಹೋದರೆ ಅಲ್ಲಿ ಸಾಕಷ್ಟು ಜ್ಞಾನ ಮತ್ತು ವಿಜ್ಞಾನವಿದೆ. ಅಲ್ಲಿ ಹೇಳಿರುವ ಸಂಗತಿಗಳು ಈಗ ನಿಜವಾಗಿವೆ. ನಾನು ಆ ಕಥೆಗಳನ್ನು ಸಮಕಾಲೀನ ಸನ್ನಿವೇಶದಲ್ಲಿ ಬೆರೆಸಲು ಬಯಸುತ್ತೇನೆ. ನಾನು ಅದನ್ನು ‘ಪುಣ್ಯಕೋಟಿ’ಯಲ್ಲಿ ಪ್ರಯೋಗಿಸಲು ಪ್ರಯತ್ನಿಸುತ್ತಿದ್ದೇನೆ. ಇದು ವೈಜ್ಞಾನಿಕ ಮತ್ತು ಹೊಸ ನಿರೂಪಣೆಯ ಚಿತ್ರವಾಗಿರುತ್ತದೆ. ನಾನು ಅದರ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಈ ಚಿತ್ರ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ನನ್ನ ಬಾಕಿ ಇರುವ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ ಖಂಡಿತವಾಗಿಯೂ ಅದನ್ನು ತೆರೆಮೇಲೆ ತರುತ್ತೇನೆ’ ಅಂತಾ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.