ಯಾರ ಸಹಾಯವೂ ಇಲ್ಲದೆ ಶೌಚಾಲಯ ನಿರ್ಮಿಸಿ ಜಾಗೃತಿ ಮೂಡಿಸಿದ 87ರ ವೃದ್ಧೆ!
87 ವರ್ಷದ ವೃದ್ಧೆಯೊಬ್ಬರು ತಮ್ಮ ಮನೆಯಲ್ಲಿ ಯಾರ ಸಹಾಯವನ್ನೂ ಪಡೆಯದೆ ಶೌಚಾಲಯ ನಿರ್ಮಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.
ಉದ್ದಾಂಪುರ್: ಜಮ್ಮು-ಕಾಶ್ಮೀರದ ಉದ್ದಾಂಪುರ ಜಿಲ್ಲೆಯ ಬದಾಲಿ ಗ್ರಾಮದ 87 ವರ್ಷದ ವೃದ್ಧೆಯೊಬ್ಬರು ತಮ್ಮ ಮನೆಯಲ್ಲಿ ಯಾರ ಸಹಾಯವನ್ನೂ ಪಡೆಯದೆ ಶೌಚಾಲಯ ನಿರ್ಮಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಇಳಿ ವಯಸ್ಸಿನಲ್ಲಿಯೂ ತಮ್ಮ ಗ್ರಾಮವನ್ನು ಬಯಲು ಮುಕ್ತ ಶೌಚಾಲಯ ಗ್ರಾಮವನ್ನಾಗಿಸಲು ಜಾಗೃತಿ ಮೂಡಿಸಲು ಇವರಲ್ಲಿರುವ ಕಾಳಜಿ ನಿಜಕ್ಕೂ ಮೆಚ್ಚುವಂಥದ್ದು.
ಸ್ವಚ್ಛ ಭಾರತ ಅಭಿಯಾನದಡಿ ಬದಾಲಿ ಗ್ರಾಮದಲ್ಲಿ ಜಿಲ್ಲಾಡಳಿತ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಇದರಿಂದ ಪ್ರಭಾವಗೊಂಡ ವೃದ್ಧೆ ತಾವೇ ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸಿದ್ದಾರೆ.
"ಬಯಲಿನಲ್ಲಿ ಶೌಚಕ್ಕೆ ಹೋಗುವುದರಿಂದ ಹಲವು ಕಾಯಿಲೆಗಳಿಗೆ ಒಳಗಾಗುತ್ತೇವೆ. ಹಾಗಂತ ಕೆಲಸಗಾರರಿಗೆ ಹಣ ನೀಡಿ ಶೌಚಾಲಯ ನಿರ್ಮಿಸುವಷ್ಟು ಹಣ ನನ್ನಲ್ಲಿರಲಿಲ್ಲ. ಆದ್ದರಿಂದ ಕೇವಲ ಮಣ್ಣು ಮತ್ತು ಇಟ್ಟಿಗೆಗಳನ್ನು ಬಳಸಿ ನಾನೇ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಇನ್ನು 7 ದಿನಗಳಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಳ್ಳಲಿದೆ" ಎಂದು ಆ ವೃದ್ಧ ಮಹಿಳೆ ANI ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ಈಕೆಯ ಕಾರ್ಯವನ್ನು ಪ್ರಶಂಸಿಸಿರುವ ಉಧಂಪೂರ್ ಉಪ ಆಯುಕ್ತ ಪ್ರಶಂಸಿಸುತ್ತಾ, "ಜನರು ತಮ್ಮ ಸಾಂಪ್ರದಾಯಿಕ ಮನೋಭಾವವನ್ನು ಮೊದಲು ಬದಲಿಸಿಕೊಳ್ಳಬೇಕು. 87 ವರ್ಷ ವಯಸ್ಸಿನ ಮಹಿಳೆ ಯಾರ ಸಹಾಯವಿಲ್ಲದೆ ಶೌಚಾಲಯವನ್ನು ನಿರ್ಮಿಸುವುದೆಂದರೆ ಸಾಮಾನ್ಯ ಮಾತಲ್ಲ. ಈ ವೃದ್ಧ ಮಹಿಳೆಯಿಂದ ಪ್ರತಿಯೊಬ್ಬರೂ ಪಾಠ ಕಲಿಯಬೇಕಿದೆ" ಎಂದಿದ್ದಾರೆ. ಅಲ್ಲದೆ, ಈ ಮಹಿಳೆಗೆ ಅಗತ್ಯವಾದ ಎಲ್ಲಾ ಸೌಲಭ್ಯವನ್ನೂ ಜಿಲ್ಲಾಡಳಿತ ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.