ನವದೆಹಲಿ: ವಾಯುಮಾಲಿನ್ಯ ಮಕ್ಕಳ ಆರೋಗ್ಯದ ಮೇಲೆ ತೀವ್ರತರ ಪರಿಣಾಮ ಬೀರುತ್ತಿದ್ದು, ಸಾವನ್ನಪ್ಪುತ್ತಿರುವ ಪ್ರತಿ 10 ಮಕ್ಕಳಲ್ಲಿ ಒಂದು ಮಗು ಕಲುಷಿತ ಗಾಳಿ ಸೇವನೆಯಿಂದ ಮೃತಪಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ. 


COMMERCIAL BREAK
SCROLL TO CONTINUE READING

ಸ್ವಚ್ಛ ವಾತಾವರಣ ಎಂಬ ಶೀರ್ಷಿಕೆಯಲ್ಲಿ 15 ವರ್ಷಕ್ಕಿಂತ ಕೆಳಗಿನ ಸುಮಾರು 6 ಲಕ್ಷ ಮಕ್ಕಳು 2016ರಲ್ಲಿ ಮನೆಯ ಒಳಗಿನ ಮತ್ತು ಮನೆಯ ಹೊರ ವಾತಾವರಣದ ವಾಯುಮಾಲಿನ್ಯಗಳಿಗೆ ತುತ್ತಾಗುತ್ತಿದ್ದಾರೆ. ಜಾಗತಿಕವಾಗಿ ವಿಶ್ವದ 18 ವರ್ಷಕ್ಕಿಂತ ಕೆಳವಯಸ್ಸಿನ ಶೇಕಡಾ 93ರಷ್ಟು ಮಕ್ಕಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಾಯುಗುಣಮಟ್ಟದ ಮಾರ್ಗಸೂಚಿ ಪ್ರಕಾರ ವಾತಾವರಣದಲ್ಲಿ ಸುತ್ತುವರಿದ ಸೂಕ್ಷ್ಮ ಕಣ (PM2.5) ಮಟ್ಟಗಳು 5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ 630 ಮಿಲಿಯನ್ ಮತ್ತು 15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ 1.8 ಬಿಲಿಯನ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಬಿಡುಗಡೆ ಮಾಡಿರುವ ಅಧ್ಯಯನದಲ್ಲಿ ಹೇಳಿದೆ.


ಮನೆಯೊಳಗೆ ಸೃಷ್ಟಿಯಾಗುವ ವಾಯುಮಾಲಿನ್ಯದಿಂದಾಗಿ ಭಾರತದಲ್ಲಿ ಐದು ವರ್ಷದೊಳಗಿನ 67,000 ಮಕ್ಕಳು ಅಸುನೀಗಿದ್ದಾರೆ. ಹೊರಭಾಗದ ವಾಯುಮಾಲಿನ್ಯದಿಂದಾಗಿ ಅಂದರೆ ವಾಹನಗಳಿಂದ ಉಂಟಾಗುವ ಮಾಲಿನ್ಯದಿಂದ ಸರಿಸುಮಾರು 61,000 ಸಾವಿರ ಐದು ವರ್ಷದೊಳಗಿನ ಮಕ್ಕಳು ಭಾರತದಲ್ಲಿ ಮೃತಪಟ್ಟಿವೆ ಎಂದು ಈ ಅಧ್ಯಯನ ವರದಿ ಹೇಳಿದೆ.


ಮಕ್ಕಳು ಹೆಚ್ಚು ಸಮಯದಲ್ಲಿ ಮೈದಾನದಲ್ಲಿ, ದೈಹಿಕ ಚಟುವಟಿಕೆಯ ಆಟೋಟಗಳಲ್ಲಿ ತೊಡಗಿಸಿಕೊಂಡರೆ, ವಾಯುಮಾಲಿನ್ಯವನ್ನು ಸಮರ್ಥವಾಗಿ ಎದುರಿಸಲು ಶಕ್ತಿ ಬರುತ್ತದೆ. ಆದರೆ, ಈಗಿನ ಮಕ್ಕಳು ದೈಹಿಕ ಚಟುವಟಿಕೆ ಇಲ್ಲದೆ, ಮನೆಯ ಒಳಗೆ ಹೆಚ್ಚು ಸಮಯ ಕಳೆಯುವುದರಿಂದ ಮನೆಯೊಳಗಿನ ವಾಯುಮಾಲಿನ್ಯಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ತಾಯಿ ಅಡುಗೆ ಮಾಡುವಾಗ ಮಕ್ಕಳು ಅವರೊಂದಿಗೆ ಇರುತ್ತದೆ. ಅಡುಗೆ ಮನೆಯಲ್ಲಿ ಇಂಧನ ಉರಿಸುತ್ತಿರುವುದರಿಂದ ಅದು ನೇರವಾಗಿ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಹೆಚ್ಚಾಗಿ ಮಕ್ಕಳ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮವಾಗುತ್ತಿದೆ ಎಂದು ವರದಿ ತಿಳಿಸಿದೆ.


2016ರಲ್ಲಿ 5 ವರ್ಷಕ್ಕಿಂತ ಕೆಳಗಿನ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಕಲುಷಿತ ಗಾಳಿ ಸೇವಿಸಿ ಭಾರತದಲ್ಲಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೊಸ ಅಧ್ಯಯನ ತಿಳಿಸಿದೆ. ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯ ಹೊಂದಿರುವ ದೇಶಗಳಲ್ಲಿ ಇದೇ ವಯಸ್ಸಿನ ಶೇಕಡಾ 98ರಷ್ಟು ಮಕ್ಕಳು ವಾಯುಮಾಲಿನ್ಯಕ್ಕೆ ತುತ್ತಾಗುತ್ತಾರೆ ಎಂದು ಅಧ್ಯಯನ ತಿಳಿಸಿದೆ.


ವಿಶ್ವ ಆರೋಗ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ ಮರಿಯಾ ನೈರಾ, ವಾಯು ಮಾಲಿನ್ಯವು ನಮ್ಮ ಮಕ್ಕಳ ಮಿದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ, ನಾವು ಊಹೆ ಮಾಡುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ವಾಯುಮಾಲಿನ್ಯ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಿದ್ದಾರೆ.