ಅವರಪ್ಪನಾಣೆ ಕುಮಾರಸ್ವಾಮಿ ಗೆಲ್ಲೋದಿಲ್ಲ: ಸಿದ್ದರಾಮಯ್ಯ
ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ನಾನು ಒಂದು ದಿನ ಪ್ರಚಾರ ಮಾಡಿದರೆ ಸಾಕು, ಕುಮಾರಸ್ವಾಮಿ ಸೋಲುತ್ತಾರೆ. ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಇಬ್ಬರನ್ನೂ ನಾನು ಸೋಲಿಸಬಲ್ಲೆ ಎಂದು ಸಿದ್ದರಾಮಯ್ಯ ಹೇಳಿದರು.
ಮೈಸೂರು: ಹೆಚ್.ಡಿ.ಕುಮಾರಸ್ವಾಮಿ ಅವರಪ್ಪನಾಣೆ ನಾನೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲೋದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
ಸುತ್ತೂರು ಮಠಕ್ಕೆ ತೆರಳುವ ಮುನ್ನ ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಪರವಾಗಿದ್ದಾರೆ. ಎಲ್ಲರೂ ನನ್ನನ್ನು ಸೋಲಿಸಲು ಯತ್ನಿಸಿದಾಗಲೇ, ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ನಾನು ಒಂದು ದಿನ ಪ್ರಚಾರ ಮಾಡಿದರೆ ಸಾಕು, ಕುಮಾರಸ್ವಾಮಿ ಸೋಲುತ್ತಾರೆ. ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಇಬ್ಬರನ್ನೂ ನಾನು ಸೋಲಿಸಬಲ್ಲೆ ಎಂದು ಸಿದ್ದರಾಮಯ್ಯ ಹೇಳಿದರು.
ಕುಮಾರಸ್ವಾಮಿ ಅವರಪ್ಪನಾಣೆ ನಾನೇ ಗೆಲ್ಲೋದು!
ಈ ಹಿಂದೆ ಸಿದ್ದರಾಮಯ್ಯ ಅವರು "ಅವರಪ್ಪನಾಣೆ" ಎಂದು ಕುಮಾರಸ್ವಾಮಿ ಅವರ ಬಗ್ಗೆ ಟೀಕಿಸುವಾಗ ಹೇಳಿದ್ದರು. ಇದಕ್ಕೆ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ "ಸಿದ್ದರಾಮಯ್ಯ ಅವರು ಬೇಕಿದ್ದರೆ ಅವರಪ್ಪನಾಣೆ ಇಟ್ಟುಕೊಳ್ಳಲಿ, ನಮ್ಮಪ್ಪನ್ನ ಅವರಿಗೇನು ನಾನು ಗುತ್ತಿಗೆ ಕೊಟ್ಟಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸುದ್ದಿಗಾರರು ಕೇಳಿದ ಪ್ರಶ್ನಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮತ್ತೊಮ್ಮೆ "ಅವರಪ್ಪನಾಣೆಗೂ ಅವರು ಗೆಲ್ಲುವುದಿಲ್ಲ, ನಾನೇ ಗೆಲ್ಲೋದು" ಎನ್ನುತ್ತಾ ಮತ್ತೊಮ್ಮೆ ದೇವೇಗೌಡರ ಮೇಲೆ ನಗುತ್ತಲೇ ಆಣೆ ಮಾಡಿದರು.
ಎಷ್ಟು ಸಾರಿ ಹೇಳೋದು, ನಾನು ಚಾಮುಂಡೇಶ್ವರಿಯಲ್ಲೇ ನಿಲ್ಲೋದು!
"2006ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಯಡಿಯೂರಪ್ಪ ಹಾಗೂ ದೇವೇಗೌಡರ ಕುಟುಂಬ ಒಂದಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಸೋಲಿಸಲು ಆಗಲಿಲ್ಲ. ಈಗಲೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲೋದು ನಾನೇ. ಈ ಕ್ಷೇತ್ರವನ್ನು ಬಿಟ್ಟು ಬೇರೆ ಯಾವುದೇ ಕ್ಷೇತ್ರದಲ್ಲೂ ನಾನು ಸ್ಪರ್ಧೆ ಮಾಡುವುದಿಲ್ಲ. ಎಷ್ಟು ಸಾರಿ ನಿಮಗೆ ಹೇಳೋದು, ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಸ್ಪರ್ಧಿಸ್ತೀನಿ ಅಂತ" ಎಂದು ಸಿಟ್ಟಾದ ಸಿದ್ದರಾಮಯ್ಯ ಅವರು "I will contest from Chamundeshwari" ಎಂದು ಮೂರು ಬಾರಿ ಪುನರುಚ್ಚರಿಸಿ, ಎಲ್ಲರ ಅನುಮಾನಗಳಿಗೆ ತೆರೆ ಎಳೆದರು.
ಅವರಿಗೂ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಸಂಬಂಧವಿಲ್ಲ!
ಮುಂದುವರೆದು ಅಲ್ಲದೆ, ಹೆಚ್. ವಿಶ್ವನಾಥ್ ಮತ್ತು ವಿ. ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ವಿರುದ್ಧ ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ಅವರಿಗೂ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಸಂಬಂಧವಿಲ್ಲ. ಅವರು ವಿರೋಧಿ ಪಾಳಯದಲ್ಲಿದ್ದರೂ ನನಗೇನೂ ಸಮಸ್ಯೆಯಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಪರವಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೆಲ್ಲೋದು ನಾನೇ ಎಂದರು.