ಉಳಿದ ಅನ್ನದಿಂದ ಮಾಡಿ ರುಚಿಕರ ಪಕೋಡ, ಇಲ್ಲಿದೆ ಪಾಕವಿಧಾನ
ಟೇಸ್ಟಿ ಮತ್ತು ಗರಿಗರಿಯಾದ ಚಾವಲ್ ಪಕೋಡ ನಿಮಗೆ ಶೀತದ ಸಮಯದಲ್ಲಿ ಉತ್ತಮ ಅನುಭವವನ್ನು ನೀಡುತ್ತದೆ.
ಬೆಂಗಳೂರು: ಕಡಲೆ ಹಿಟ್ಟಿನಿಂದ ಪಕೋಡ ಮಾಡುವುದನ್ನು ನೀವು ನೋಡಿರಬಹುದು. ಹಲವರು ಬ್ರೆಡ್ ಪಕೋಡಾ ಕೂಡಾ ಮಾಡ್ತಾರೆ. ಆದರೆ ಉಳಿದಿರುವ ಅನ್ನದಿಂದ ಪಕೋಡ ಮಾಡುವುದನ್ನು ನೀವು ನೋಡಿದ್ದೀರಾ... ಹಲವು ವೇಳೆ ಅಡುಗೆ ಮಾಡುವಾಗ ಸ್ವಲ್ಪ ಅನ್ನ ಜಾಸ್ತಿಯಾಗುತ್ತದೆ. ಕೆಲವರಿಗೆ ಅನ್ನ ವೇಸ್ಟ್ ಆಗೋಗುತ್ತಲ್ಲ ಅನ್ನೋ ಚಿಂತೆಯಾದರೆ, ಇನ್ನೂ ಕೆಲವರಿಗೆ ಮನೆಯಲ್ಲಿ ಹಿರಿಯರು ಬೈತಾರೆ ಅನ್ನೋ ಬೇಜಾರು. ಆದರೆ ಇಂದು ನಾವು ನಿಮಗೆ ನೀಡುವ ಟಿಪ್ಸ್ ನಿಂದ ಇನ್ಮುಂದೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ.
ಹೌದು, ಇಂದು ನಾವು ನಿಮಗೆ ಉಳಿದ ಅನ್ನದಿಂದ ಕಡಿಮೆ ಸಮಯದಲ್ಲಿ ರುಚಿಕರವಾದ ಪಕೋಡ ಮಾಡೋದು ಹೇಗೆ ಅನ್ನೋದನ್ನ ತಿಳಿಸಿಕೊಡಲಿದ್ದೇವೆ. ಇದರಿಂದ ಅಯ್ಯೋ ಅನ್ನ ಜಾಸ್ತಿಯಾಯ್ತು ಅನ್ನೋ ಚಿಂತೆ ದೂರವಾಗುವುದರ ಜೊತೆಗೆ ಶೀತದ ಸಮಯದಲ್ಲಿ ಉತ್ತಮ ಅನುಭವ ನೀಡುವ ಪಕೋಡ ಕೂಡ ತಯಾರಾಗುತ್ತೆ.
ಚಾವಲ್ ಪಕೋಡ ತಯಾರಿಸಲು ಬೇಕಾಗುವ ಸಾಮಾನು:
- 2 ಕಪ್ ಅನ್ನ
- ಈರುಳ್ಳಿ 2
- ಶುಂಠಿ 1
- 1/4 ಕಪ್ ತಾಜಾ ಪುದೀನ ಎಲೆಗಳು
- ಕಡಲೆ ಹಿಟ್ಟು 1/2 ಕಪ್
- ರುಚಿಗೆ ತಕ್ಕಷ್ಟು ಉಪ್ಪು
- ಸಣ್ಣಗೆ ಕತ್ತರಿಸಿ ಹಸಿರು ಮೆಣಸಿನಕಾಯಿ 4
- ಚಾಟ್ ಮಸಾಲ 1 ಟೀಸ್ಪೂನ್
ಚಾವಲ್ ಪಕೋಡ ತಯಾರಿಸುವ ವಿಧಾನ:
* ಒಂದು ಬಾಣಲೆ ತೆಗೆದುಕೊಂಡು ಪಕೋಡ ತಯಾರಿಸಲು ಬೇಕಾಗುವಷ್ಟು ಎಣ್ಣೆ ಹಾಕಿ ಕಾಯಲು ಬಿಡಿ
* ಈರುಳ್ಳಿ, ಶುಂಠಿ ಮತ್ತು ಪುದೀನ ಎಲೆಗಳನ್ನು ಸಣ್ಣಗೆ ಕತ್ತರಿಸಿ.
* ಒಂದು ಪಾತ್ರೆಯಲ್ಲಿ ಅನ್ನ ತೆಗೆದುಕೊಂಡು, ಕತ್ತರಿಸಿದ ಈರುಳ್ಳಿ, ಶುಂಠಿ, ಪುದೀನ ಎಲೆಗಳನ್ನು ಸೇರಿಸಿ.
* ಇದರ ನಂತರ ಕಡಲೆ ಹಿಟ್ಟು, ಉಪ್ಪು, ಹಸಿ ಮೆಣಸಿನಕಾಯಿ ಮತ್ತು ಚಾಟ್ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈ ಮಿಶ್ರಣವನ್ನು ಎಷ್ಟು ಗಾತ್ರದ ಪಕೋಡ ಬೇಕೋ ಹಾಗೆ ನಿಮಗೆ ಬೇಕಾದಂತೆ ಚೆಂಡುಗಳನ್ನಾಗಿ ಮಾಡಿ.
* ಎಣ್ಣೆ ಕಾದಿದೆಯೇ ಎಂದು ನೋಡಿ ಚೆಂಡುಗಳಾಗಿ ಮಾಡಿಟ್ಟುಕೊಂಡ ಪಕೋಡ ಹಿಟ್ಟನ್ನು ಕಾದ ಎಣ್ಣೆಗೆ ಬಿಡಿ.
* ಪಕೋಡ ಮಿಶ್ರಣದ ಉಂಡೆಗಳನ್ನೂ ಗೋಲ್ಡನ್ ಮತ್ತು ಗರಿಗರಿಯಾಗುವವರೆಗೆ ಎಣ್ಣೆಯಲ್ಲಿ ಫ್ರೈ ಮಾಡಿ.
* ಬಳಿಕ ಪಕೋಡವನ್ನು ಪ್ಲೇಟ್ ನಲ್ಲಿ ಚಟ್ನಿಯೊಂದಿಗೆ ಸವಿಯಲು ನೀಡಿ.