ಭಾರತದಲ್ಲಿ ವಾಯುಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆ ಬರೋಬ್ಬರಿ 1.2 ಮಿಲಿಯನ್!
ವಾಯು ಮಾಲಿನ್ಯಕ್ಕೆ ದೀರ್ಘಕಾಲ ಒಳಪಡುವುದರಿಂದ ಪಾರ್ಶ್ವವಾಯು, ಮಧುಮೇಹ, ಹಾರ್ಟ್ ಅಟ್ಯಾಕ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಗಂಭೀರ ಸ್ವರೂಪದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದಾಗಿ 2017ರಲ್ಲಿ 5 ಮಿಲಿಯನ್ ಗೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ.
ನವದೆಹಲಿ: ಭಾರತದಲ್ಲಿ 2017ನೇ ಇಸವಿಯಲ್ಲಿ ವಾಯುಮಾಲಿನ್ಯದಿಂದಾಗಿ 1.2 ಮಿಲಿಯನ್ ಅಂದರೆ 12 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಜಾಗತಿಕ ವರದಿ ಬಹಿರಂಗಪಡಿಸಿದೆ.
ಜಾಗತಿಕ ವಾಯು ಪರಿಸ್ಥಿತಿ ಮಟ್ಟ 2019 ವರದಿಗಳ ಪ್ರಕಾರ, ಒಳಾಂಗಣ ಮತ್ತು ಹೊರಾಂಗಣ ವಾಯು ಮಾಲಿನ್ಯಕ್ಕೆ ದೀರ್ಘಕಾಲ ಒಳಪಡುವುದರಿಂದ ಪಾರ್ಶ್ವವಾಯು, ಮಧುಮೇಹ, ಹಾರ್ಟ್ ಅಟ್ಯಾಕ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಗಂಭೀರ ಸ್ವರೂಪದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದಾಗಿ 2017ರಲ್ಲಿ 5 ಮಿಲಿಯನ್ ಗೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ.
ಇವರಲ್ಲಿ 3 ಮಿಲಿಯನ್ ಜನರು ನೇರವಾಗಿ ಪಿ.ಎಂ.2.5 ಕಾರಣದಿಂದಲೇ ಸಂಭವಿಸಿದ್ದು, ಇವುಗಳಲ್ಲಿ ಅರ್ಧದಷ್ಟು ಸಾವುಗಳು ಭಾರತ ಮತ್ತು ಚೀನಾದಲ್ಲಿ ಸಂಭವಿಸಿದೆ. ಅಲ್ಲದೆ, ವಿಶ್ವದಲ್ಲಿ ನೇರ ವಾಯುಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳಲ್ಲಿ ಅರ್ಧದಷ್ಟು ಸಾವುಗಳಿಗೆ ಭಾರತ ಮತ್ತು ಚೀನಾದಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯವೇ ನೇರ ಕಾರಣವಾಗಿದೆ ಎಂಬ ಅಂಶವನ್ನೂ ಈ ವರದಿ ಉಲ್ಲೇಖಿಸಿದ್ದು, ಎರಡೂ ರಾಷ್ಟ್ರಗಳಲ್ಲಿ 2017ರಲ್ಲಿ ವಾಯುಮಾಲಿನ್ಯದಿಂದ 1.2 ಮಿಲಿಯನ್ ಜನ ಸಾವನ್ನಪ್ಪಿದ್ದಾರೆ ಎಂದಿದೆ.
ಅಮೆರಿಕಾದ ಹೆಲ್ತ್ ಎಫೆಕ್ಟ್ಸ್ ಇನ್ಸ್ಟಿಟ್ಯೂಟ್ ಈ ವರದಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಇತರ ಸಾವುಗಳಿಗಿಂತ ವಾಯುಮಾಲಿನ್ಯದಿಂದಾಗುವ ಸಾವುಗಳ ಸಂಖ್ಯೆ ಹೆಚ್ಚಿದ್ದು, ಮೂರನೇ ಸ್ಥಾನದಲ್ಲಿದೆ. ಧೂಮಪಾನದಿಂದ ಸಾಯುವವರ ಸಂಖ್ಯೆ ನಾಲ್ಕನೇ ಸ್ಥಾನದಲ್ಲಿದೆ ಎನ್ನಲಾಗಿದೆ.
ಅಲ್ಲದೆ, ದಕ್ಷಿಣ ಏಷ್ಯಾದಲ್ಲಿ ಜನಿಸುವ ಪ್ರತಿ ಮಗುವಿನ ಜೀವಿತಾವಧಿ ಎರಡು ವರ್ಷದ ಆರು ತಿಂಗಳು ಕಡಿಮೆಯಾಗಿದ್ದು, ಇದಕ್ಕೆ ಹೆಚ್ಚುತ್ತಿರುವ ವಾಯುಮಾಲಿನ್ಯವೇ ಕಾರಣ ಎಂಬ ಆತಂಕಕಾರಿ ಅಂಶ ಈ ವರದಿಯಿಂದ ಬಹಿರಂಗವಾಗಿದೆ. ಅದೇ ರೀತಿ ಜಾಗತಿಕ ಜೀವಿತಾವಧಿ 20 ತಿಂಗಳುಗಳಷ್ಟು ಕಡಿಮೆಗೊಳ್ಳುತ್ತಿದೆ ಎನ್ನಲಾಗಿದೆ.