ಮಂಡ್ಯ: ಮಂಡ್ಯ  ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ಸಿಗದಿರುವವರು ಬಿಪಿಎಲ್ ಹಾಗೂ ಆಧಾರ್ ಕಾರ್ಡ್‍ನ್ನು ನೀಡಿ ಈ ಯೋಜನೆಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ವೈದ್ಯರ ಸೇವೆಯ ಕೊರತೆಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದು, ಆರೋಗ್ಯ ಇಲಾಖೆಯು ರಾತ್ರಿ ವೇಳೆ ವೈದ್ಯರ ಸೇವೆ ಸಿಗುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ಸಂಬಂಧಿಸಿದ ವೈದ್ಯರಿಗೆ ನೀಡಬೇಕು ಎಂದು ತಿಳಿಸಿದ ಮುಖ್ಯ ಮಂತ್ರಿಗಳು ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ಸಿಗದಿರುವವರು ಬಿಪಿಎಲ್ ಹಾಗೂ ಆಧಾರ್ ಕಾರ್ಡ್‍ನ್ನು ನೀಡಿ ಈ ಯೋಜನೆಯ ಸೌಲಭ್ಯ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.


ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 550 ಹಾಸಿಗೆಯ ಸಾಮರ್ಥ್ಯವಿರುವ ಸೌಲಭ್ಯವಿದ್ದು, ಇದನ್ನು 700 ಹಾಸಿಗೆಯ ಸಾಮರ್ಥ್ಯವಿರುವ ಸೌಲಭ್ಯಕ್ಕೆ ಮೇಲ್ದರ್ಜಗೆರೆಸಲು 30 ಕೋಟಿ ಅನುದಾನ ಕಾಯ್ದಿರಿಸಲಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ನೀಡುವಂತೆ ಅವರು ತಿಳಿಸಿದರು.


ವಸತಿ ರಹಿತರಿಗೆ ಕೂಡಲೇ ಸರ್ಕಾರಿ ಜಮೀನನ್ನು ಗುರ್ತಿಸಿ ನಿವೇಶನವನ್ನು ನೀಡಲು ಕ್ರಮವಹಿಸುವಂತೆ ಸೂಚಿಸಿದ ಅವರು ಜಿಲ್ಲೆಯಲ್ಲಿ ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳ ಮಾಹಿತಿ ಹಾಗೂ ಅಗತ್ಯವಾಗಿ ಬೇಕಾಗಿರುವ ಶಾಲಾ ಕಟ್ಟಡಗಳು ಹಾಗೂ ಶಾಲೆಗಳ ಅಭಿವೃದ್ಧಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಸಿದ್ಧಪಡಿಸಿ ನೀಡುವಂತೆ ಸೂಚಿಸಿದರು.


ಯುವ ಜನರಿಗಾಗಿ ಸರ್ಕಾರ  ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಜಿಲ್ಲಾ ಕ್ರೀಡಾಂಗಣ ಹಾಗೂ ತಾಲ್ಲೂಕು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದ ಮುಖ್ಯಮಂತ್ರಿಗಳು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗಾಗಿ ಭೂಮಿಯನ್ನು ನೀಡಿರುವ ರೈತರಿಗೆ  ಸಮರ್ಪಕವಾದ ಪರಿಹಾರವನ್ನು ನೀಡಬೇಕು ಎಂದು ತಿಳಿಸಿದರು.


ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದ ಹೆಚ್.ಡಿ.ರೇವಣ್ಣ, ಪ್ರವಾಸೋದ್ಯಮ ಸಚಿವರಾದ ಸಾರಾ ಮಹೇಶ್, ಸಾರಿಗೆ ಸಚಿವರಾದ ತಮ್ಮಣ್ಣ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಎಲ್ಲಾ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕರು ಉಪಸ್ಥಿತರಿದ್ದರು.